ಹಳಿಯಾಳ ಪುರಸಭೆಗೆ ದ್ರೌಪದಿ ಅಧ್ಯಕ್ಷೆ

HLY-Droupadi
Published on

ಹಳಿಯಾಳ: ಪುರಸಭೆಯ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ದ್ರೌಪದಿ ಅಗಸರ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮೀ ವಡ್ಡರ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಮಡಿವಾಳ ಸಮಾಜದ 11ನೇ ವಾರ್ಡ್‌ನ ದ್ರೌಪದಿ ಅಗಸರ ಹಾಗೂ ಎಸ್ಸಿ ಸಮುದಾಯದ 19ನೇ ವಾರ್ಡ್‌ನ ಲಕ್ಷ್ಮೀ ವಡ್ಡರ ಆಯ್ಕೆಯಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ಪುರಸಭೆಯ ಸಭಾಂಗಣದಲ್ಲಿ ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ ಹಾಗೂ ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ ಅವರು ಚುನಾವಣೆ ಪ್ರಕ್ರಿಯೆ ಆರಂಭಿಸಿದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ದ್ರೌಪದಿ ಹಾಗೂ ಬಿಜೆಪಿಯಿಂದ 22ನೇ ವಾರ್ಡ್‌ನ ಸಂಗೀತಾ ಜಾಧವ ನಾಮಪತ್ರ ಸಲ್ಲಿಸಿದ್ದರು. ದ್ರೌಪದಿ ಅಗಸರ ಅವರು 17ಮತ ಹಾಗೂ ಸಂಗೀತಾ ಜಾಧವ ಕೇವಲ 7 ಮತ ಪಡೆದರು.

ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ವಡ್ಡರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಶಾಸಕ ಆರ್.ವಿ.ದೇಶಪಾಂಡೆ ಸೇರಿದಂತೆ ಕಾಂಗ್ರೆಸ್‌ನ 15 ಸದಸ್ಯರು, ಬಿಜೆಪಿಯ 7 ಸದಸ್ಯರು ಹಾಗೂ ಜೆಡಿಎಸ್ ಒಬ್ಬ ಮಹಿಳಾ ಸದಸ್ಯೆ ಮತದಾನದಲ್ಲಿ ಭಾಗಿಯಾಗಿದ್ದರು.
ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು. ಮುನ್ನಚ್ಚರಿಕೆಯ ಕ್ರಮವಾಗಿ ಪುರಸಭೆಯ ಆವರಣದಲ್ಲಿ ಸಿಪಿಐ ಜೈಪಾಲ್ ಪಾಟೀಲ್ ಮತ್ತು ಪಿಎಸ್‌ಐ ವಿನೋದ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಬೇಕು ಎಂದರು.

ಮೈತ್ರಿ ಧರ್ಮ ಪಾಲಿಸುತ್ತಿಲ್ಲ

ಹಳಿಯಾಳದಲ್ಲಿ ಜೆಡಿಎಸ್‌ನವರು ಬಿಜೆಪಿಯೊಂದಿಗೆ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎನ್ನುವುದಕ್ಕೆ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಸಾಕ್ಷಿಯಾಗಿದೆ ಎಂದು ಪುರಸಭೆ ಸದಸ್ಯ ಉದಯ ಹೂಲಿ ಹೇಳಿದರು.
ಪಟ್ಟಣದಲ್ಲಿ ಚುನಾವಣೆ ಪ್ರಕ್ರಿಯೆ ಬಳಿಕ ಸುದ್ದಿಗೊಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಇದೆ. ಆದರೆ, ಹಳಿಯಾಳದಲ್ಲಿ ಮಾತ್ರ ಜೆಡಿಎಸ್‌ನವರು ಕಾಂಗ್ರೆಸ್‌ನೊಂದಿಗೆ ಕೈಜೊಡಿಸಿ ಮೈತ್ರಿ ಧರ್ಮವನ್ನು ಮುರಿದಿದ್ದಾರೆ ಎಂದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ಜತೆಯಾಗಿ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಶಾಂತಾ ಹಿರೇಕರ, ಸಂಗೀತಾ ಜಾಧವ, ರೂಪಾ ಗಿರಿ, ರಾಜೇಶ್ವರಿ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net