

ಚಿಕ್ಕಬಳ್ಳಾಪುರ: ರಾಜಕೀಯ ಭವಿಷ್ಯಕ್ಕಾಗಿ ತಾತ್ಕಾಲಿಕ ಸಮಾಜ ಸೇವೆಯ ಹೆಸರಿನಲ್ಲಿ ಪರಿಚಯಿಸಿಕೊಳ್ಳುವಂತಹುದು ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೈಗೊಂಡಿದ್ದ 4 ಕೋಟಿ ರೂ ವೆಚ್ಚದ ಭವನ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಮಾಣಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಆತ್ಮಸಂತೃಪ್ತಿ ದೊರೆಯುತ್ತದೆ. ಹಾಗೆಯೇ ಬಡ ಜನರಿಗೂ ಅನುಕೂಲವಾಗುತ್ತದೆ. ಇದು ನಿಸ್ಸಂದೇಹವಾಗಿ ಶ್ಲಾಘನೀಯ. ಆದರೆ, ಇತ್ತೀಚೆಗೆ ಸ್ವಾರ್ಥಕ್ಕಾಗಿ ತಾತ್ಕಾಲಿಕ ಪ್ರಚಾರಕ್ಕೆ ಸೀಮಿತವಾಗಿರುವುದು ದುರದೃಷ್ಟಕರ ಎಂದು ತಿಳಿಸಿದರು.
ಕೆಲ ತೀರ್ಮಾನಗಳಿಗೆ ರಾಜಕೀಯ ಜೀವನದಲ್ಲಿ ಎರಡು ಬಾರಿ ಎಡವಿದ್ದು ಇದರಿಂದ ಪಾಠವನ್ನು ಕಲಿತಿದ್ದೇನೆ. ಇದರ ನಡುವೆಯೂ ದೂರದೃಷ್ಟಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ರಾಜೀಯಾಗಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಎಂ.ಜಯರಾಮ್, ಖಜಾಂಚಿ ಪ್ರೊ ಕೋಡಿರಂಗಪ್ಪ ಮತ್ತಿತರರು ಇದ್ದರು.
*ನಾನು 13 ಬಾರಿ ರಕ್ತ ಕೊಟ್ಟಿರುವೆ
ಬಾಗೇಪಲ್ಲಿ ಕ್ಷೇತ್ರದಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯೊಂದಿಗೆ ರಕ್ತದಾನ ಶಿಬಿರಗಳನ್ನು ಕೈಗೊಂಡು ಬರಲಾಗುತ್ತಿದೆ. ಸ್ವತಃ 13 ಬಾರಿ ರಕ್ತದಾನ ಮಾಡಿರುವೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ರಕ್ತದಾನವು ಜಾತ್ಯತಿತ ಕೆಲಸ. ತುರ್ತು ಆರೋಗ್ಯ ಸಂದರ್ಭದಲ್ಲಿ ಯಾವುದೇ ಜಾತಿಮತ ಭೇದ ನೋಡದೇ ರಕ್ತವನ್ನು ನೀಡಿ, ಪ್ರಾಣವನ್ನು ಉಳಿಸಬೇಕಾಗುತ್ತದೆ ಎಂದರು. ರಕ್ತ ನಿಧಿ ಕೇಂದ್ರಕ್ಕೆ ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.