

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾಟಕಗಳು ಸಮಾಜದ ಪ್ರತಿಬಿಂಬವಾಗಿದ್ದು, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಕ್ತಿ ರಂಗಭೂಮಿಗಿದೆ. ನಾಟಕಗಳು ಎಲ್ಲವನ್ನು ಒಳಗೊಂಡ ಸಮಗ್ರ ಕಲೆಯಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗುರು ಹಿರೇಮಠ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಿ. ಶಿವಶಂಕರ ವಿರಚಿತ ನವಲಗುಂದ ಅಜಾತ ನಾಗಲಿಂಗ ಲೀಲೆ ಆಧ್ಯಾತ್ಮಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಟಕ ಜೀವಂತ ಕಲೆಯಾಗಿದೆ. ನಮ್ಮ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ನಾಟಕಕ್ಕಿದೆ. ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತಿಕವಾದ ನಾಟಕಗಳು ತಮ್ಮ ಹಿಂದಿನ ವೈಭವ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ರಂಗ ಕಲಾವಿದರ ಬದುಕು ಇಂದು ಸಂಕೀರ್ಣ ಸ್ಥಿತಿಯಲ್ಲಿದ್ದು, ಅವರಿಗೆ ಸಿಗಬೇಕಾದ ಉತ್ತಮ ಸ್ಥಾನ-ಮಾನಗಳು ಸಿಗುತ್ತಿಲ್ಲ. ಕಲೆ ಮತ್ತು ಕಲಾವಿದರು ಈ ನಾಡಿನ ಬಹುದೊಡ್ಡ ಆಸ್ತಿ. ಈ ರಂಗ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದರು.
ಸತೀಶ ತುರಮರಿ ಅಧ್ಯಕ್ಷತೆ ವಹಿಸಿದ್ದರು. ನಾಟಕ ನಿರ್ದೇಶಕ, ನಾಗಲಿಂಗ ಪಾತ್ರಧಾರಿ ಎಂ. ಎಸ್. ಕೊಟ್ರೇಶ ಅವರನ್ನು ಸನ್ಮಾನಿಸಲಾಯಿತು.
ನಂತರ ಬಿ. ಶಿವಶಂಕರ ವಿರಚಿತ, ಎಂ.ಎಸ್. ಕೊಟ್ರೇಶ ನಿರ್ದೇಶನದ ನವಲಗುಂದ ಅಜಾತ ನಾಗಲಿಂಗ ಲೀಲೆ ಆಧ್ಯಾತ್ಮಿಕ ನಾಟಕವನ್ನು ನೂಲಗೇರಿಯ ಶ್ರೀ ಕೊಟ್ಟೂರೇಶ್ವರ ನಾಟಕ ಮಂಡಳಿ ತಂಡ ಪ್ರಸ್ತುತಪಡಿಸಿತು.
ಶಂಕರ ಕುಂಬಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಬಾಳಣ್ಣ ಶೀಗಿಹಳ್ಳಿ, ಶಶಿಧರ ತೊಡಕರ, ಡಾ. ಶಶಿಧರ ನರೇಂದ್ರ, ರವಿ ಕುಲಕರ್ಣಿ, ವಿಷಯಾ ಜೇವೂರ, ಸನ್ಮತಿ ಅಂಗಡಿ, ವೀರಣ್ಣ ಪತ್ತಾರ, ಇತರರು ಇದ್ದರು.
ಶಂಕರ ಹಲಗತ್ತಿ ವಂದಿಸಿದರು.