ನಾಟಕಗಳು ಸಮಾಜದ ಪ್ರತಿಬಿಂಬ

1 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ರಂಗಭೂಮಿಯಲ್ಲಿ ನಮ್ಮ ಸಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ಇದೆ ಎಂದು ಬೆಳಗಾವಿಯ ಮೋಹನ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಎಂ.ಎಂ. ಕಲಬುರ್ಗಿ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ರಕ್ತ ವಿಲಾಪ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಟಕಗಳು ಎಲ್ಲವನ್ನೂ ಒಳಗೊಂಡ ಒಂದು ಸಮಗ್ರ ಕಲೆ. ಜನರ ಹೃದಯವನ್ನು ನೇರವಾಗಿ ತಟ್ಟುವ ಕಲೆಯಾಗಿದೆ. ಅಳಿವಿನ ಅಂಚಿನಲ್ಲಿರುವ ರಂಗಭೂಮಿಗೆ ಪುನರ್ಜನ್ಮ ನೀಡಬೇಕಿದೆ. ಸರ್ಕಾರ ರಂಗಕಲಾವಿದರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಒದಗಿಸಬೇಕು. ಅಂದಾಗ ರಂಗಭೂಮಿಯನ್ನು ಇನ್ನೂ ಜೀವಂತವಾಗಿರಿಸಲು ಸಾಧ್ಯವಾಗುತ್ತದೆ. ಕರ್ನಾಟಕದ ಏಕೀಕರಣಕ್ಕೆ ರಂಗಭೂಮಿ ಕೊಡುಗೆ ಅನನ್ಯ ಎಂದರು.

ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಎಂ.ಎಂ. ಕಲಬುರ್ಗಿ ಒಬ್ಬ ಸಮರ್ಥ, ನಿರ್ಭೀತ ಸಂಶೋಧಕರಾಗಿದ್ದವರು. ಅವರು ವಚನಗಳನ್ನು ಭಾರತೀಯ ಎಲ್ಲ ಭಾಷೆಗಳಿಗೂ ಭಾಷಾಂತರಗೊಳಿಸಿ ಬಸವಣ್ಣನವರ ವಚನಗಳನ್ನು ಜೀವಂತವಾಗಿರಿಸಿದ್ದಾರೆ. ಡಾ. ಎಂ.ಎಂ. ಕಲಬುರ್ಗಿ ಇಂದು ಇಲ್ಲವಾದರೂ ಅವರ ಚಿಂತನೆಗಳು, ವಿಚಾರಧಾರೆಗಳು ಜನಮಾನಸದಲ್ಲಿ ಶಾಶ್ವತವಾಗಿವೆ ಎಂದರು.

ರಂಗ ಕಲಾವಿದರಾದ ಸುಲ್ತಾನಪುರದ ಮಲ್ಲಪ್ಪ ಮುಳಗುಂದ ಹಾಗೂ ಹುಬ್ಬಳ್ಳಿಯ ಭರಮಗೌಡ ಪಾಟೀಲ ಅವರಿಗೆ ಸನ್ಮಾನಿಸಲಾಯಿತು. ಡಾ. ಜಿ. ರಾಮಕೃಷ್ಣ, ಡಾ. ಸಿದ್ಧನಗೌಡ ಪಾಟೀಲ, ಬಸವರಾಜ ಮುರಗೋಡ, ಡಾ. ಮೃತ್ಯುಂಜಯ ಶೆಟ್ಟರ, ಎಸ್​.ಎಂ. ದಾನಪ್ಪಗೌಡರ, ಅರವಿಂದ, ಡಾ. ಬಾಳಪ್ಪಾ ಚಿನಗುಡಿ, ಇತರರು ಇದ್ದರು.

ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ನಂತರ ಡಾ. ವಿಕ್ರಮ ವಿಸಾಜಿ ರಚನೆ, ಪ್ರವಿಣರೆಡ್ಡಿ ಗುಂಜಹಳ್ಳಿ ನಿರ್ದೇಶನದ ರಕ್ತ ವಿಲಾಪ ನಾಟಕವನ್ನು ಸಮುದಾಯ ರಾಯಚೂರ ತಂಡ ಪ್ರದರ್ಶಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net