

ಕೆ.ಎಂ.ದೊಡ್ಡಿ: ರಂಗ ಕಲೆಗಳ ಉಳಿವಿಗೆ ಸಂಘ, ಸಂಸ್ಥೆಗಳು ಶ್ರಮಿಸಬೇಕು ಎಂದು ಸಮಾಜ ಸೇವಕಿ ಚೈತ್ರಾ ಶಶಿಧರ ಹೇಳಿದರು.
ಇಲ್ಲಿನ ದೇವರಹಳ್ಳಿ ರಸ್ತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಳಿಕಾಂಬಾ ರಂಗಭೂಮಿ ಕಲಾವಿದರ ಸೇವಾ ಟ್ರಸ್ಟ್ 3ನೇ ವಾರ್ಷಿಕೋತ್ಸವ, ದಕ್ಷಯಜ್ಞ ಹಾಗೂ ಭೃಗು ಮುನಿಯ ಗರ್ವಭಂಗ ಎಂಬ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗ ಕಲೆಗಳನ್ನು ಕಾಳಜಿಯಿಂದ ಕಾಪಾಡುವ ನಿಟ್ಟಿನಲ್ಲಿ ಚಿಕ್ಕರಸಿನಕೆರೆ ಹೋಬಳಿಯಲ್ಲಿ ಹಲವು ಕಲಾವಿದರು ಸೇರಿ ಬಳಗ ಕಟ್ಟಿಕೊಂಡು ಪೌರಾಣಿಕ ನಾಟಕ ಪರಂಪರೆ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಶ್ರಮವಹಿಸಿರುವುದು ಶ್ಲಾಘನೀಯ ಎಂದರು.ಅಧುನಿಕ ಯುಗದಲ್ಲಿ ಮೊಬೈಲ್ ಫೋನ್, ಟಿವಿ, ಸಿನಿಮಾಗಳ ಗೀಳು ಹೆಚ್ಚಾಗಿದೆ. ಇದು ರಂಗಭೂಮಿ ಅವನತಿಗೆ ಕಾರಣವಾಗಿದೆ. ಸ್ಥಿತಿ ಹೀಗಿರುವಾಗ ಪೌರಾಣಿಕ ನಾಟಕಗಳಿಗೆ ಜೀವ ತುಂಬಿ ಅವುಗಳನ್ನು ರಂಗದ ಮೇಲೆ ಅಭಿನಯಿಸಿ, ಕಲಾ ರಸಿಕರನ್ನು ಒಂದೆಡೆ ಕಲೆ ಹಾಕುವುದು ಸಾಧನೆಯೇ ಆಗಿದೆ ಎಂದರು. ರಂಗಭೂಮಿಯಲ್ಲೇ ನಿಜವಾದ ಕಲಾವಂತಿಕೆ ಇದೆ. ಈ ಕಲೆ ಮತ್ತು ಕಲಾವಿದರಿಗೆ ಉತ್ತೇಜನ ಅಗತ್ಯ. ಸಿನಿಮಾ, ಧಾರಾವಾಹಿಗಳಲ್ಲಿ ಚಿತ್ರೀಕರಣ ಸಂದರ್ಭ ಲೋಪವಾದರೆ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಇದೆ. ಆದರೆ ರಂಗಭೂಮಿ ಪ್ರದರ್ಶನ ನೇರಾನೇರ. ಇಲ್ಲಿ ಮೂಡುವ ಅಭಿವ್ಯಕ್ತಿಯು ಕಲಾವಿದರ ಪ್ರತಿಭೆಗೆ ಕನ್ನಡಿ ಹಿಡಿದಂತಿರುತ್ತದೆ ಎಂದರು.
ನಟನೆ ಸವಾಲಿನ ಕೆಲಸ: ರಂಗಭೂಮಿಯಲ್ಲಿ ನಟನೆ ಮಾಡುವುದು ಸವಾಲಿನ ಕೆಲಸ. ಇಲ್ಲಿ ಸೈ ಎನಿಸಿಕೊಂಡವರು ಯಾವುದೇ ಟಿವಿ, ಸಿನಿಮಾಗಳಲ್ಲಿ ಲೀಲಾಜಾಲವಾಗಿ ನಟಿಸಬಲ್ಲರು. ರಂಗಭೂಮಿ ಎಂಬುದು ಕಲಾವಿದರ ತವರು ಎಂದು ಚೈತ್ರಾ ಶಶಿಧರ ಗೌಡ ಶ್ಲಾಘಿಸಿದರು. ಸಿ.ಎ.ಕೆರೆ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಮುಖಂಡರಾದ ಅಜ್ಜಹಳ್ಳಿ ಮನು, ಕ್ಯಾತಘಟ್ಟ ಸುನೀಲ್, ಡಿ.ಎ.ಕೆರೆ ಗಜೇಂದ್ರ, ಅಣ್ಣೂರು ಶಿವರಾಮು, ನವೀನ್, ಈಶಾ ಪ್ರಸಾದ್, ಸಿದ್ದೇಗೌಡ ಇತರರು ಇದ್ದರು. ನಂತರ ದಕ್ಷಯಜ್ಞ ಹಾಗೂ ಭೃಗು ಮುನಿಯ ಗರ್ವಭಂಗ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.