'ಹಕ್ಕಿಯ ಹೆಗಲೇರಿ' ಉಡುಪಿಗೆ ಬಂದ ಪ್ರಸನ್ನವೆಂಕಟ...

Draama 1
Published on

ರಾಜಾಂಗಣದಲ್ಲಿ ಬಾಗಲಕೋಟೆಯ ಜವಾರಿ ಕನ್ನಡ ರಿಂಗಣ

ಕೃಷ್ಣನ ಸನ್ನಿಧಿಯಲ್ಲಿ ಕಾಖಂಡಕಿ ದಾಸರ ಜೀವನ ಅನಾವರಣ

ಪ್ರಶಾಂತ ಭಾಗ್ವತ ವಿಜಯವಾಣಿ

ಉಡುಪಿಯ ಕಡುಗೋಲು ಶ್ರೀಕೃಷ್ಣನ ಸನ್ನಿಧಾನಕ್ಕೆ ಉತ್ತರ ಕರ್ನಾಟಕ ಭಾಗದ ಬಯಲುಸೀಮೆ ಬಾಗಲಕೋಟೆ ಜಿಲ್ಲೆಯ ದಾಸಸ್ರೇಷ್ಠರಾದ ಪ್ರಸನ್ನವೆಂಕಟ ದಾಸರು ಹಕ್ಕಿಯ ಹೆಗಲೇರಿ ರಾಜಾಂಗಣಕ್ಕೆ ಬಂದಿದ್ದರು.

ಜೀವನದಲ್ಲಿ ಯಾರಿಗೂ ಸ್ವಯಂ ಏನೂ ಮಾಡಲು ಸಾಧ್ಯವಿಲ್ಲ. ಅದೇನೇ ಆದರೂ ಎಲ್ಲವೂ ಭಗವಂತನಾದ ಹರಿಯ ಸದಿಚ್ಛೆ. ಆತನ ಆಟಕ್ಕೆ ನಾವೆಲ್ಲ ಬಗೆಬಗೆಯಾಗಿ ವರ್ತಿಸುತ್ತೇವೆ. ಹರಿ ಸ್ಮರಣೆ ಇಲ್ಲದ ಜೀವನ ನಶ್ವರ ಎಂಬ ಪ್ರಸನ್ನವೆಂಕಟ ದಾಸರ ಸಂದೇಶವನ್ನು ತುಳುನಾಡಿನಲ್ಲಿ ಹಕ್ಕಿಯ ಹೆಗಲೇರಿ ನಾಟಕ ಪ್ರಚುರ ಪಡಿಸಿತು.

ಖಡಕ್​ ಜವಾರಿ ಭಾಷೆ

Draama 2
ಕರಾವಳಿ ಜನರಿಗೆ ಕನ್ನಡ ಹಾಗೂ ತುಳು ಭಾಷೆಯ ಸಾಂಸ್ಕೃತಿಕ ಅಭಿರುಚಿ ಇದೆ. ಆದರೆ, ಉತ್ತರ ಕರ್ನಾಟಕದ ಖಡಕ್​ ರೊಟ್ಟಿಯಂತೆ ಇರುವ ಜವಾರಿ (ಕನ್ನಡ) ಭಾಷೆಯ ನಾಟಕ ಜನಮನ ಸೆಳೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪರ್ಯಾಯ ಪುತ್ತಿಗೆ ಮಠ ಆಯೋಜಿಸಿರುವ ಮಂಡಲೋತ್ಸವದಲ್ಲಿ ಕಾಖಂಡಕಿ ದಾಸರೆಂದೇ ಖ್ಯಾತರಾಗಿರುವ ಪ್ರಸನ್ನವೆಂಕಟ ದಾಸರ ಜೀವನ ಆಧಾರಿತ ಹಕ್ಕಿಯ ಹೆಗಲೇರಿ ನಾಟಕ ಪ್ರದರ್ಶಿಸಲಾಯಿತು.

ಮನೋಜ್ಞ ಅಭಿನಯ

Draama 3
ಸಾಹಿತಿ ಆನಂದ ಝುಂಜರವಾಡ ರಚನೆ, ದಿ. ಪ್ರಭಾಕರ ಕುಲಕರ್ಣಿ ನಿರ್ದೇಶನದಲ್ಲಿ ಸಿದ್ಧಗೊಳಿಸಿರುವ ನಾಟಕವನ್ನು ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಭಾ ತಂಡದವರು ಮನೋಜ್ಞವಾಗಿ ಅಭಿನಯಿಸಿದರು. ರಾಮರಾವ್​ ದೇಸಾಯಿ, ಅನಂತ ಪುರೋಹಿತ, ಲಕ್ಷ್ಮೀನಾರಾಯಣಾಚಾರ್​ ಗುಡಿ, ರಘೂತ್ತಮ ಕಂಚಿ, ಶಿಲ್ಪಾ ಹರಿಮಂದಿರ, ವೆಂಕಟೇಶ ಪರ್ವತೀಕರ ಮತ್ತಿತರರು ವಿವಿಧ ಪಾತ್ರಗಳಿಗೆ ಜೀವ ತುಂಬಿದರು. ಸಂತೋಷ ಗದ್ದನಕೇರಿ ಹಾಗೂ ತಂಡದವರು ಹಿನ್ನೆಲೆ ಸಂಗೀತ ನೀಡಿದರು.

ವೆಂಕ್ಯಾನ ಬದುಕು ಅರುಹಿದ ನಾಟಕ

Draama 4
Draama 5
ವೆಂಕ್ಯಾ (ವೆಂಕಟ)ನ ಮನೆಯಲ್ಲಿ ಬಡತನ ತುಂಬಿದ್ದರೂ ಮನದೊಳಗಿತ್ತು ದೃಢವಾದ ದೈವಭಕ್ತಿ. ತಂದೆ-ತಾಯಿ ಇಲ್ಲದ ಅನಾಥ ಪ್ರಜ್ಞೆಯ ನಡುವೆಯೂ ಅಣ್ಣನ ಮಮಕಾರ ಆಸರೆಯಾಗಿತ್ತು. ಆದರೆ, ವೈನಿ (ಅತ್ತಿಗೆ)ಯ ಬಿರು ನುಡಿಗಳು ಬದುಕೇ ಬೇಡವೆನಿಸುತ್ತಿತ್ತು. ಮನೆಯಲ್ಲಿ ಹಿರಿಯರಿರಲಿಲ್ಲ. ಇದ್ದವರೂ ವೆಂಕ್ಕಾನಿಗೆ ಹಿರಿಯರಾಗಲಿಲ್ಲ. ಒಂದು ದಿನ ಊರಿಗೆ ಬಂದಿದ್ದ ಬಾಬಾಗಳೊಂದಿಗೆ ಮನೆ ಬಿಟ್ಟು ಹರಿಯನ್ನೇ ನಂಬಿ ಮುಂದೆ ಸಾಗಿದರು. ತಿರುಪತಿಯಲ್ಲಿದ್ದ ಸಂದರ್ಭದಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೆ, ಕೃಷರಾಗಿ ಇನ್ನೇನು ಜೀವ ಹೋಗುವ ಸಂದರ್ಭದಲ್ಲಿ ಹರಿಯನ್ನು ಕುರಿತು ದೇವರೇ, ನಿನ್ನನ್ನು ನಂಬಿ ಬಂದ ನಾನು ಹಸಿವೆಯಿಂದ ಸತ್ತರೂ ಚಿಂತೆಯಿಲ್ಲ. ಆದರೆ, ನಿನ್ನ ಕ್ಷೇತ್ರದಲ್ಲಿ ಅಜ್ಞಾನಿಯೋರ್ವನ ಸಾವಿಗೆ ನೀನು ಕಾರಣನಾದೆ ಎಂಬ ಕಳಂಕ ನಿನಗೆ ಬಾರದಿರಲಿ ಎನ್ನುವಾಗ ಭಗವಂತನ ಸಾಾತ್ಕಾರವಾಗುತ್ತದೆ. ಪ್ರಸನ್ನವೆಂಕಟ ಅಂಕಿತದೊಂದಿಗೆ ನನ್ನ ಸನ್ನಿಧಾನದಲ್ಲಿಯೇ ಕೀರ್ತನೆ ರಚಿಸುವಂತೆ ದೇವರ ವರ ಪ್ರಾಪ್ತಿಯಾಗುತ್ತದೆ. ಮುಂದೆ ದೇಶ ಸಂಚಾರ ಮಾಡುತ್ತ, ಉತ್ತರ ಕರ್ನಾಟಕದ ಕನ್ನಡ ಭಾಷೆಯಲ್ಲಿಯೇ ನೂರಾರು ಕೀರ್ತನೆ ರಚಿಸಿದರು. ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆ ಕಾಂತಾ... ಎಂಬ ವಿಶಿಷ್ಟ ಪದ ಬಳಕೆಯ ಹಾಡಿನೊಂದಿಗೆ ಹರಿದಾಸ ಸಾಹಿತ್ಯ ಹಾಗೂ ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚಿಸಿದರು. ಚಾಲುಕ್ಯರ ಬಾದಾಮಿಯಲ್ಲಿ ಬದುಕಿಗೆ ಮಂಗಳ ಹಾಡಿದ ದೃಶ್ಯಗಳು ಪ್ರೇಕ್ಷಕರ ಹೃದಯ ತಲುಪಿದವು. ಪುತ್ತಿಗೆ ಮಠದ ಉಭಯ ಶ್ರೀಪಾದಂಗಳು ನಾಟಕ ವೀಕ್ಷಿಸಿ ಕಲಾವಿದರಿಗೆ ಆಶೀರ್ವದಿಸಿ, ಪ್ರೋತ್ಸಾಹಿಸಿದರು.
Team
Sachin
ಶ್ರೀಕೃಷ್ಣನು ದಾಸಪ್ರಿಯ. ಆತನ ಸನ್ನಿಧಾನದಲ್ಲಿ ಜನ್ಮಾಷ್ಟಮಿ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಶ್ರೇಷ್ಠ ದಾಸರಾಗಿದ್ದ ಪ್ರಸನ್ನವೆಂಕಟ ದಾಸರ ಜೀವನ ವೃತ್ತಾಂತದ ನಾಟಕ ಪ್ರದರ್ಶನ ಮಾಡಿರುವುದು ಅರ್ಥಪೂರ್ಣ. ನಾಟಕದಲ್ಲಿ ಬಳಸಲಾದ ಉತ್ತರ ಕರ್ನಾಟಕದ ಭಾಷೆ, ಪ್ರಸನ್ನವೆಂಕಟ ದಾಸರೆ ರಚಿಸಿದ ಕೀರ್ತನೆಗಳು ಈ ಭಾಗದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಇದು ನಾಟಕ ಕಲೆಯಷ್ಟೇ ಅಲ್ಲ. ಜನರ ಮನಸ್ಸನ್ನು ದೇವರತ್ತ, ಅಧ್ಯಾತ್ಮದತ್ತ ಪರಿವರ್ತಿಸಬಲ್ಲ ದೈವಿಕ ಕಲೆ. ಇಂತಹ ಕಲಾವಿದರಿಗೆ ಉಡುಪಿಯ ಪುತ್ತಿಗೆ ಮಠ ನಿರಂತರ ಪ್ರೋತ್ಸಾಹ ನೀಡಲಿದೆ.| ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net