

ಮಂಡ್ಯ: ಜನರಲ್ಲಿ ಸಾಂಸ್ಕೃತಿಕ, ಪರಿಸರ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವಂತಹ ಕಾರ್ಯಕ್ರಮ ಹೆಚ್ಚಾಗಿ ಆಯೋಜನೆಗೊಳ್ಳುವಂತಾಗಲಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ ನೀಡಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನೆಲದನಿ ಬಳಗದ ವತಿಯಿಂದ ಆಯೋಜಿಸಿದ್ದ ನಿರ್ಧಿಗಂತ ಪ್ರಸ್ತುತಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನೆಲದನಿ ಬಳಗ ಬಹಳಷ್ಟು ನಾಟಕವನ್ನು ವೈಚಾರಿಕವಾಗಿ ನಡೆಸಿಕೊಂಡು ಬರುತ್ತಿದೆ. ಇವರಿಗೆ ಸಹಕಾರ ನೀಡಿರುವವರಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ತೆಂಗಿನ ಮರದಲ್ಲಿ ಎಳನೀರು ಕೋಯ್ಲು ಮಾಡಿಸುತ್ತಿರುವುದರಿಂದ ಕೊಬ್ಬರಿಗೆ ದುಬಾರಿ ಬೆಲೆ ನೀಡುವ ಸ್ಥಿತಿ ಪ್ರಸ್ತುತದಲ್ಲಿ ನಿರ್ಮಾಣವಾಗುತ್ತಿದೆ. ಜತೆಗೆ ಕೊಬ್ಬರಿಯುಕ್ತ ಪದಾರ್ಥಗಳ ಬೇಡಿಕೆಯು ಹೆಚ್ಚುತ್ತದೆ. ಆದ್ದರಿಂದ ಇನ್ನಾದರೂ ಆರೋಗ್ಯಯುಕ್ತ ಜೀವನ ನಡೆಸಲು ರೈತರು ಕೊಬ್ಬರಿ ಆಗುವವರೆಗೂ ತೆಂಗಿನಕಾಯಿಗಳನ್ನು ಇಟ್ಟುಕೊಳ್ಳಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಕೇವಲ ಹಣದ ಆಸೆಗೆ ಮೊದಲೇ ಎಳನೀರು ಕೋಯ್ಲು ಮಾಡಿಸಿದರೆ ನಂತರ ಕೊಬ್ಬರಿ ಬೆಲೆ ದುಬಾರಿಯಾಗಿ ನೀವೇ ಕೊಂಡುಕೊಳ್ಳುವ ಸ್ಥಿತಿಗೆ ತಲುಪತ್ತೀರಾ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 650ಕ್ಕೂ ಹೆಚ್ಚು ಆಲೆಮನೆಗಳಿವೆ. ಅವುಗಳ ಅಭಿವೃದ್ಧಿಗೆ ಸಹಕಾರ ಅಗತ್ಯವಿದೆ ಎಂಬುದನ್ನು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಬೆಲ್ಲ ಉತ್ಪಾದನೆಗೆ ಒತ್ತಾಸೆಯಾಗಿ ನಿಲ್ಲುವ ಜತೆಗೆ ಸಕ್ಕರೆಯನ್ನು ಪಡಿತರ ವಿತರಣೆಯಲ್ಲಿಯೂ ನೀಡಬೇಕು ಎನ್ನುವ ದೃಷ್ಟಿಯಿಂದ ಅವಕಾಶ ನೀಡಿದರೆ, ಸಕ್ಕರೆ ಕಾರ್ಖಾನೆ ಮತ್ತು ರೈತರಿಗೆ ಅನುಕೂಲವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಜನರು ಬೆಲ್ಲವನ್ನು ಹೆಚ್ಚು ಬಳಸಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್ ಕುಮಾರ್, ಅಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜು ವಿ.ಭೈರಿ, ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು, ಸ್ಪಂದನಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಆದಿತ್ಯಗೌಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ಸಮಾನ ಮನಸ್ಕ ವೇದಿಕೆಯ ಮುಕುಂದ, ನೆಲದನಿ ಬಳಗದ ಪೋಷಕಿ ಎಸ್.ಸಿ.ರುಕ್ಮಿಣಿ ಶಂಕರೇಗೌಡ, ಅಧ್ಯಕ್ಷ ಲಂಕೇಶ್ ಮಂಗಲ ಇದ್ದರು. ಇದೇ ವೇಳೆ ನಾಟಕ ಪ್ರದರ್ಶನ ನಡೆಯಿತು. ಅಂತೆಯೇ ಪತ್ರಕರ್ತ ಯೋಗೇಶ್ ಅವರನ್ನು ಸನ್ಮಾನಿಸಲಾಯಿತು.