

ಭಾಲ್ಕಿ: ಪಠ್ಯಾಧಾರಿತ ನಾಟಕಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿವೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಪಿಯುಸಿ ಪಠ್ಯಾಧಾರಿತ ಬೋಳೇಶಂಕರ ಮತ್ತು ಕೃಷ್ಣೆಗೌಡರ ಆನೆ ನಾಟಕ ಪ್ರದರ್ಶನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾಲ್ಕು ಗೋಡೆಯ ಕೊಠಡಿ ಒಳಗೆ ಒಬ್ಬ ಶಿಕ್ಷಕ ಪಾಠ ಮಾಡುವುದಕ್ಕಿಂತ, ಆ ಪಾಠವನ್ನು ನಾಟಕ ಚಟುವಟಿಕೆಯ ಮೂಲಕ ಹೇಳುವುದರಿಂದ ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದರಿಂದ ಅವರ ಕಲಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು ಎಂದರು.
ಡಾ.ಚಂದ್ರಶೇಖರ ಕಂಬಾರ ರಚಿಸಿದ ಬೋಳೇಶಂಕರ ಮತ್ತು ಪೂರ್ಣಚಂದ್ರ ತೇಜಸ್ವಿ ರಚಿಸಿದ ಕೃಷ್ಣೆಗೌಡರ ಆನೆ ನಾಟಕದ ಮೂಲಕ ಕಲಬುರಗಿಯ ರಂಗ ಕಲಾ ತಂಡದ ಕಲಾವಿದರು ಪಠ್ಯಾಧಾರಿತ ವಿಷಯಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರುವಂತೆ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಕಲ್ಯಾಣರಾವ ಪಾಟೀಲ್, ಲಚಮ್ಮರೆಡ್ಡಿ ಇತರರಿದ್ದರು. ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ ಪ್ರಾರ್ಥನೆ ಗೀತೆ ನಡೆಸಿ ಕೊಟ್ಟರು. ಮಧುಕರ ಗಾಂವಕರ್ ನಿರೂಪಣೆ ಮಾಡಿ ವಂದಿಸಿದರು.
ಕಲಬುರಗಿಯ ರಂಗಾ ಕಲಾ ತಂಡದ ಕಲಾವಿದರು ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿಕೊಂಡು ಕಲಾ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿರುವುದು ಮಾದರಿ ಎನಿಸಿದೆ.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ