ಅಶ್ಲೀಲತೆ ರಹಿತ ತುಳು ರಂಗಭೂಮಿ : ಸುಬ್ರಹ್ಮಣ್ಯ ಭಟ್ ಹರ್ಷ

12
Published on

ಮೂಡುಬಿದಿರೆ: ರಂಗಭೂಷಣ ಮಣಿ ಕೋಟೆಬಾಗಿಲು ಸಾರಥ್ಯದ ಪಿಂಗಾರ ಕಲಾವಿದೆರ್ ಬೆದ್ರದ ‘ಓಂಕಾರ’ ನೂತನ ನಾಟಕವನ್ನು ಕನ್ನಡ ಭವನದಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ಅಲಂಗಾರು ಬಡಗ ಶ್ರೀಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನಾಟಕ ಪ್ರದರ್ಶನ ಉದ್ಘಾಟಿಸಿ, ತುಳು ನಾಟಕಗಳಲ್ಲಿ ಅಶ್ಲೀಲತೆ ಇದೆ ಎನ್ನುವ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿರುವ ಯಾವುದೇ ತುಳು ನಾಟಕ ತಂಡಗಳಲ್ಲಿ ಅಶ್ಲೀಲತೆ ಕಾಣಸಿಗುವುದಿಲ್ಲ. ಪಿಂಗಾರ ಕಲಾವಿದರು ತಂಡ ಕಳೆದ ವರ್ಷ ಕದಂಬ ಎನ್ನುವ ಯಶಸ್ವಿ ನಾಟಕವನ್ನು ತುಳು ರಂಗಭೂಮಿಗೆ ನೀಡಿ ದಾಖಲೆ ಮಾಡಿದ್ದಾರೆ. ಅದೇ ರೀತಿ ಓಂಕಾರ ನಾಟಕ ಪ್ರೇಕ್ಷಕರನ್ನು ರಂಜಿಸಲಿ ಎಂದು ಶುಭ ಹಾರೈಸಿದರು.

ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ರಂಗಭೂಮಿ ಕಲಾವಿದ ನವೀನ್ ಅಳಕೆ, ಉದ್ಯಮಿ ಕೆ.ಶ್ರೀಪತಿ ಭಟ್, ಕೋಟೆಬಾಗಿಲು ಮಹಾಮ್ಮಾಯಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ಕೋಟೆಗಾರ್, ಉದ್ಯಮಿ ನವೀನ್ ಟಿ.ಆರ್, ಕಾಶಿಪಟ್ನ ಗ್ರಾಪಂ ಅಧ್ಯಕ್ಷ ಸತೀಶ್ ಕಾಶಿಪಟ್ನ, ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಮುಖ್ಯಸ್ಥ ರೊಡಲ್ಫ್ ಲೋಬೊ, ತಂಡದ ರೂವಾರಿ ಮಣಿ ಕೋಟೆಬಾಗಿಲು ಪ್ರಸ್ತಾವನೆಗೈದು, ಸ್ವಾಗತಿಸಿದರು. ನಿತೇಶ್ ಪೂಜಾರಿ ಮಾರ್ನಾಡು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net