

ಹುಬ್ಬಳ್ಳಿ: ಜೀವನ ಕೆಟ್ಟರೆ ನಾಟಕದಿಂದ ಸುಧಾರಿಸಬಹುದು, ಆದರೆ, ನಾಟಕವೇ ಕೆಟ್ಟರೆ ಜೀವನವನ್ನು ಸುಧಾರಿಸುವುದು ಕಷ್ಟಕರ. ಜೀವನವೆಂಬುದು ಪ್ರತ್ಯಕ್ಷ ಅನುಭವ. ನಾಟಕವೆಂಬುದು ಅಪ್ರತ್ಯಕ್ಷ ಅನುಭವವೆಂದು ವರಕವಿ ಡಾ. ದ.ರಾ. ಬೇಂದ್ರೆ ಅವರು ನಾಟಕಗಳ ಮಹತ್ವದ ಕುರಿತು ತಿಳಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಡಾ.ಕೆ.ಎಸ್.ಶರ್ವ ಹೇಳಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಶ್ವಶ್ರಮ ಚೇತನದಲ್ಲಿ ಸಂಜೀವಿನಿ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ.ಕೆ.ಎಸ್.ಶರ್ವ ಸಮೂಹ ಸಂಸ್ಥೆಗಳು ಆಶ್ರಯದಲ್ಲಿ ಡಾ.ಕೆ.ಎಸ್. ಶರ್ಮಾ ಅವರ 90 ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿರುವ ಡಾ.ದ.ರಾ. ಬೇಂದ್ರೆ ಸಾಹಿತ್ಯ ಸಪ್ತಾಹದ 6ನೇ ದಿನ (ಗುರುವಾರ)ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಮನ ಬೇಂದ್ರೆಯವರ ಸ್ಮರಣೆ ಅಂಗವಾಗಿ ವಾಮನ ಬೇಂದ್ರೆಯವರ ಸಮಗ್ರ ಸಾಹಿತ್ಯ ಹಾಗೂ ಜೀವನಗಾಥೆ ಕುರಿತು ಮಹಾವಿದ್ಯಾಲಯದ ಚೇರ್ಮನ್ ಮೋಹನ ಲಿಂಬಿಕಾಯಿ ಮಾತನಾಡಿದರು.
ನಾಟಕ ನಿರ್ದೇಶಕ ಡಾ. ಶಶಿಧರ ನರೇಂದ್ರ ಮಾತನಾಡಿ, ಬೇಂದ್ರೆಯವರ ಗದ್ಯಗಳು ಸರ್ವಕಾಲಕ್ಕೂ ಸಲ್ಲುವಂತಹದ್ದು. ಅವರು ಜೀವನ ಹಾಗೂ ನಾಟಕವನ್ನು ಬೇರೆ ಬೇರೆಯಾಗಿ ನೋಡಿಲ್ಲ ಎಂದು ಹೇಳಿದರು.
ಪೊ›. ಡಾ. ಜಿ.ಎಂ. ಹೆಗಡೆ ಅವರು ದ.ರಾ. ಬೇಂದ್ರೆ ಸಾಹಿತ್ಯದ ಕುರಿತು ಹಾಗೂ ವಾಮನ ಬೇಂದ್ರೆಯವರ ಒಡನಾಟದ ಕುರಿತು ಮಾತನಾಡಿದರು.
ಪ್ರಾಧ್ಯಾಪಕಿ ಪುಷ್ಪಲತಾ ಹಿರೇಮಠ, ಪ್ರೊ. ಡಾ ಬಸವರಾಜ್ ಸರವಗೋಳ, ಪ್ರಾಚಾರ್ಯ ಡಾ. ಚರಂತಯ್ಯ ಹಿರೇಮಠ, ಪ್ರೊ. ರವೀಂದ್ರ ಶಿರಳ್ಕೋರ್, ಡಾ. ಸೋಮಶೇಖರ ಹುದ್ದಾರ, ಡಾ. ಮಹೇಶ ದೇಸಾಯಿ, ಇತರರು ಇದ್ದರು.
ಸೆ. 29ರಂದು ಬೇಂದ್ರೆಯವರ ಸಾಹಿತ್ಯ ಸಪ್ತಾಹದ ಸಮಾರೋಪ ಸಮಾರಂಭ ಜರುಗಲಿದೆ.