ಆಶ್ರಯ ನೀಡಿದಾಗ ಮಾತ್ರ ಕಲಾವಿದ ಬೆಳೆಯುತ್ತಾನೆ

19-02-HNPP 25 2
Published on

ಹಿರಿಯ ರಂಗಕರ್ಮಿ ಕೃಷ್ಣಮೂರ್ತಿ ಅಭಿಮತ

ಹೊಳೆನರಸೀಪುರ: ಪ್ರೇಕ್ಷಕರು ಮತ್ತು ಕಲಾಭಿಮಾನಿಗಳು ನೀಡಿದ ಅವಕಾಶದಿಂದ ನಾನು ರಂಗ ನಿರ್ದೇಶಕನಾಗಿ ಬೆಳೆದೆ ಎಂದು ಹಿರಿಯ ರಂಗಕರ್ಮಿ ಕೃಷ್ಣಮೂರ್ತಿ ಹೇಳಿದರು. ಬೀಚೇನಹಳ್ಳಿ ಗ್ರಾಮದಲ್ಲಿ ಶ್ರೀ ಚಂದ್ರ ಮೌಳೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಗ್ರಾಮದ ದೇವಾಲಯದ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನ ಸಂದರ್ಭ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸುತ್ತಮುತ್ತಲ ಗ್ರಾಮಗಳಲ್ಲಿ ಯಾವುದೇ ನಾಟಕ ಪ್ರದರ್ಶನ ಮಾಡಬೇಕು ಎಂದು ನಿರ್ಧರಿಸಿದಾಗ ನನಗೆ ಕಲಾವಿದರು ಅವಕಾಶ ನೀಡಿದ್ದಾರೆ. ರಂಗ ಕಲೆಗಳಿಗೆ ಆಶ್ರಯ ನೀಡಿದಾಗ ಮಾತ್ರ ಕಲೆ, ಕಲಾವಿದ ಮತ್ತು ನಿರ್ದೇಶಕರು ಎತ್ತರಕ್ಕೆ ಬೆಳೆಯುತ್ತಾರೆ. ಈ ಸೇವೆಯಲ್ಲಿ ನನಗೆ ಧನ್ಯತೆ ಇದೆ ಎಂದರು. ತಾಲೂಕಿನ ಹಡವನಹಳ್ಳಿ, ಅಗ್ರಹಾರಗೇಟ್‌ನಿಂದ ಆರಂಭಿಸಿ ಹೂವಿನಹಳ್ಳಿ, ಉಣ್ಣೇನಹಳ್ಳಿ, ತಟ್ಟೆಕರೆ ಮೂಡಲಹಿಪ್ಪೆ, ಚನ್ನರಾಯಪಟ್ಟಣ, ಪಿರಿಯಾಪಟ್ಟಣ ಮತ್ತು ಮೈಸೂರಿನ ದಸರಾ ಉತ್ಸವದ ಸಂದರ್ಭದಲ್ಲೂ ನನ್ನ ನಿರ್ದೇಶನದ ನಾಟಕಗಳು ಪ್ರದರ್ಶನಗೊಂಡಿವೆ ಎಂದು ಅವರು ಸ್ಮರಿಸಿಕೊಂಡರು.

ಪ್ರದರ್ಶನಕ್ಕೆ ಬೆಂಬಲವಿದೆ: ಕಲಾವಿದ ಕೃಷ್ಣಮೂರ್ತಿ ಅವರಿಗೆ ಗ್ರಾಮಸ್ಥರ ಪರವಾಗಿ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದ ಸಂಸದ ಶ್ರೇಯಸ್ ಎಂ ಪಟೇಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಾಟಕಗಳ ಪ್ರದರ್ಶನಕ್ಕೆ ನನ್ನ ಬೆಂಬಲ ಮತ್ತು ಪ್ರೋತ್ಸಾಹ ಇದೆ ಎಂದರು. ಹಳ್ಳಿಗಳಲ್ಲಿ ಜನರು ಒಂದೆಡೆ ಸೇರಿ ಸಂಗೀತ, ನಾಟಕ ಸೇರಿದಂತೆ ಕಲಾ ಪ್ರದರ್ಶನಗಳನ್ನು ಆಗಾಗ್ಗೆ ನಡೆಸುತ್ತಿದ್ದರೆ ಒಗ್ಗಟ್ಟು, ಸೌಹಾರ್ದತೆ ಇರುತ್ತದೆ. ಕಲೆ ಉಳಿಸಿದ ಕೀರ್ತಿ ಗ್ರಾಮಕ್ಕೂ ಬರುತ್ತದೆ ಎಂದರು. ಮುಂಬರುವ ದಿನಗಳಲ್ಲಿ ನಡೆಸುವ ಕಲಾ ಪ್ರದರ್ಶನಕ್ಕೆ ನಾನೂ ಸಂಪೂರ್ಣ ಸಹಕಾರ ನೀಡುವೆ ಎಂದು ಅವರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net