

ಹುಬ್ಬಳ್ಳಿ: ಇಲ್ಲಿಯ ಜಿಹ್ವೇಶ್ವರ ಪ್ರೌಢಶಾಲೆಯ ಬಾಲಕಿಯರು ಅಭಿನಯಿಸಿದ "ಪಂಚ ಕತೆ' ನಾಟಕ ಮಕ್ಕಳನ್ನು ರಂಜಿಸಿತು.
ಸಮಾಜದ ಸ್ವಾಸ್ಥ್ಯ ಕೆಡಿಸುವ ಬೆಟ್ಟಿಂಗ್ ದಂಧೆ, ಬಾಲ್ಯವಿವಾಹ, ಹಿರಿಯ ನಾಗರಿಕರ ಶೋಷಣೆ, ಮಕ್ಕಳ ಮಾನಸಿಕ ಒತ್ತಡ, ಆರ್ಥಿಕ ತೊಂದರೆಯಿಂದಾಗಿ ಹತಾಷೆಗೊಳ್ಳುವ ಯುವತಿಯರು, ಅವರ ಮಾನಸಿಕ ತಳಮಳಗಳನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸುವಲ್ಲಿ ನಾಟಕ ಯಶಸ್ವಿಯಾಯಿತು.
ಸುನಿಧಿ ಕಲಾ ಸೌರಭ, ರೋಟರಿ ಕ್ಲಬ್ ಪೂರ್ವ ಸಂಸ್ಥೆಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 15 ದಿನಗಳ ಅಭಿನಯ ತರಬೇತಿ ಸಮಾರೋಪದಲ್ಲಿ ಈ ನಾಟಕ ಪ್ರದರ್ಶನ ನೀಡಲಾಯಿತು.
ಐಶ್ವರ್ಯ ತಾಂಬೆ ನಿರ್ದೇಶನದಲ್ಲಿ ಮಕ್ಕಳಿಂದ ರಚಿತವಾದ ಪಂಚ ಕತೆ ನಾಟಕ ನೋಡುಗರ ಮನ ಗೆದ್ದಿತು.
ಸಮಾರೋಪದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಬ್ಯಾಸಿಲ್ ಡಿಸೋಜ ಅವರು, ಮಕ್ಕಳ ಅಭಿನಯವನ್ನು ಕೊಂಡಾಡಿದರು. ಜಿವ್ಹೇಶ್ವರ ಶಿಕ್ಷಣ ಸಮಿತಿಯ ನಾಗರಾಜ ದಿವಟೆ, ಅರುಣ ಏಕಬೋಟೆ, ರೋಟರಿ ಕ್ಲಬ್ ಅಧ್ಯಕ್ಷೆ ಜೋಶ್ನಾ ಕಡಕೋಳ, ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ, ಶಿಬಿರದ ಸಂಚಾಲಕಿ ವೀಣಾ ಅಠವಲೆ, ಡೇವಿಡ್, ವಿಜಯೇಂದ್ರ ತಾಂಬೆ, ಹನುಮಂತ ಉಳ್ಳಿಗೇರಿ ಇತರರು ಉಪಸ್ಥಿತರಿದ್ದರು.