

ಮೈಸೂರು; ಬಿಜೆಪಿ ಮೀಸಲಾತಿ ವಿಚಾರದಲ್ಲಿ ಹಿಂದಿನಿಂದಲೂ ನಾಟಕೀಯ ನಡೆ ಪ್ರದರ್ಶಿಸಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಈ ಪಕ್ಷವು ಮತ್ತೊಂದು ನಾಟಕವನ್ನಾಡದೆ ಸದಾಶಿವ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೂ ಸಮಪಾಲು ದೊರೆಯಬೇಕೆಂಬ ಬೇಡಿಕೆಗೆ ಸ್ಪಂದಿಸಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸದಾಶಿವ ಆಯೋಗವನ್ನು ರಚನೆ ಮಾಡಿತು. ಮುಖ್ಯಮಂತ್ರಿ ಸದಾನಂದಗೌಡ ಅವಧಿಯಲ್ಲಿ ಇದರ ವರದಿ ಸಲ್ಲಿಕೆಯಾಗಿ ಜಗದೀಶ ಶೆಟ್ಟರ್ ಅವಧಿಯಲ್ಲಿ ಮೂಲೆ ಸೇರಿತ್ತು. ಸಂವಿಧಾನದ ತಿದ್ದುಪಡಿ ಕಾಲಂ 341ಅಡಿಯ ಕಾನೂನು ಪ್ರಕಾರ ಶೇ.17ರಷ್ಟು ಮೀಸಲಾತಿಯನ್ನು ಕಾನೂನಾತ್ಮಕವಾಗಿ ಹಂಚಿಕೆ ಮಾಡಬೇಕಿತ್ತು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಅದನ್ನು ಮಾಡಲಿಲ್ಲ. ಬದಲಿಗೆ ಇಡೀ ವರದಿಯನ್ನೇ ನಿರ್ಲಕ್ಷೃ ಮಾಡಿತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ವರ್ಷದೊಳಗೆ ಸದಾಶಿವ ವರದಿ ಜಾರಿಗೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯ ಘೋಷಿಸಿತ್ತು. ಅದರಂತೆ ಈ ವರದಿ ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಕೇಂದ್ರಕ್ಕೆ ವರದಿಯನ್ನು ಇದೀಗ ಕಳುಹಿಸಿಕೊಡಲಾಗಿದೆ. ಆದರೆ, ಈ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರವು ಒಂದು ಸಮಿತಿ ರಚಿಸಿ ಪರಿಶೀಲಿಸುತ್ತೇವೆ ಎಂದು ಹೇಳುತ್ತಿರುವುದು ಅದರ ಮತ್ತೊಂದು ನಾಟಕ ಆಗಿದೆ ಎಂದು ಕಿಡಿಕಾರಿದರು.
ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಲಿಂಗಾಯತ, ಒಕ್ಕಲಿಗರಿಗೆ ಕೊಟ್ಟು ಹಂಚಿದ ಮೀಸಲಾತಿ ಊರ್ಜಿತವಾಗದೆ ನ್ಯಾಯಾಲಯದಲ್ಲಿ ತಡೆಯಾಗಿದೆ. ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ 7ಕ್ಕೆ ಹೆಚ್ಚಿಸಿರುವುದಾಗಿ ಶ್ರೀರಾಮುಲು ಅಬ್ಬರದ ಪ್ರಚಾರ ಮಾಡಿದ್ದರು. ಇದರ ಕಥೆ ಏನು ಆಯಿತು? ಮೀಸಲಾತಿ ವಿಚಾರದಲ್ಲಿ ಬಿಜೆಪಿ ಆಡುತ್ತಿರುವ ನಾಟಕ ಸಾಕಾಗಿದೆ. ಈಗಲಾದರೂ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಮೀಸಲಾತಿ ವಿಚಾರದಲ್ಲಿ ಎಲ್ಲ ಕ್ರೆಡಿಟ್ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಸರ್ಕಾರಕ್ಕೆ ಸಲ್ಲಬೇಕು ಎಂದರು.
ಡಾ.ಯತೀಂದ್ರ ವಿರುದ್ಧ ನೀಡಿರುವ ಸಂಸದ ಪ್ರತಾಪ್ ಅವರ ಉದ್ಧಟತನದ ಹೇಳಿಕೆ ಖಂಡನೀಯ. ನೀವೂ ವಿಶೇಷ ವರದಿಗಾರ ಅಲ್ಲ, ಅಂಕಣಕಾರನೂ ಅಲ್ಲ. ಸಂಸದರಾಗಿ ಹಿಟ್ ಆ್ಯಂಡ್ ರನ್ ಮಾಡಿ ಜಾಗ ಖಾಲಿ ಮಾಡುವುದಲ್ಲ. ಎಲ್ಲರ ಪ್ರಶ್ನೆಗೂ ಉತ್ತರಿಸುವ ಕೆಲಸ ಮಾಡಬೇಕು. ಆದರೆ, ಕೆಲ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವುದು ಎಷ್ಟು ಸರಿ? ಇದನ್ನು ನಾನು ಖಂಡಿಸುತ್ತೇನೆ ಎಂದು ಗುಡುಗಿದರು.
ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ದಾಖಲೆ ಬಿಡುಗಡೆ ಮಾಡಿದ್ದು, ಬಿಜೆಪಿಗೆ ನೈತಿಕತೆಯಿದ್ದರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ರಾಜೀನಾಮೆ ಪಡೆಯಬೇಕು ಎಂದೂ ಆಗ್ರಹಿಸಿದರು.