ಹುಬ್ಬಳ್ಳಿ: ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ ಭೂಮಿ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಮಾತನಾಡಿದ್ದ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಲಿಖಿತ ಪತ್ರ ಬರೆದು ಕ್ಷಮೆ ಕೋರಿರುವುದು ಕೇವಲ ನಾಟಕ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ ಟೀಕಿಸಿದ್ದಾರೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ಶಾಸಕರು ಬೆಳಗ್ಗೆ ಹೇಳಿ ಸಂಜೆ ಕ್ಷಮೆ ಕೇಳಿದ್ದರೆ ಮುತ್ಸದ್ಧಿ ರಾಜಕಾರಣಿ ಎನ್ನಬಹುದು. ಆದರೆ, ಹೇಳಿಕೆ ಕೊಟ್ಟು 10 ದಿನಗಳ ನಂತರ ಕ್ಷಮೆ ಕೇಳುವುದರ ಹಿಂದಿನ ಕಥೆ ಬೇರೆಯೇ ಇದೆ. ಹುಬ್ಬಳ್ಳಿ -ಧಾರವಾಡ, ಮೈಸೂರ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಆಸ್ತಿ, ಬಾವಿ, ಉದ್ಯಾನ, ರಸ್ತೆ ಅತಿಕ್ರಮಣ ಹಾಗೂ ತಮ್ಮಇತರ ಭೂ ಅವ್ಯವಹಾರಗಳನ್ನು ಮುಚ್ಚಿಕೊಳ್ಳಲು ಮಾಡಿರುವ ತೇಪೆ ಹಚ್ಚುವ ಕೆಲಸ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಆ. 24ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಬ್ಬರಿಸಿದ್ದ ಶಾಸಕ ಬೆಲ್ಲದ ಅವರು ದಿಢೀರಾಗಿ ಕ್ಷಮಾಪಣೆ ಕೇಳಿರುವುದರ ಹಿಂದೆ ಮೈಸೂರಿನಲ್ಲಿ ಅವರು ನಿರ್ಮಿಸಿರುವ ವಸತಿ ವಿನ್ಯಾಸ ಅಲ್ಲದೆ ಹುಬ್ಬಳ್ಳಿ ಧಾರವಾಡ ಸಾರ್ವಜನಿಕ ಆಸ್ತಿ ಇತರ ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳಲು ಮಾಡಿರುವ ಯತ್ನ. ಶೀಘ್ರ ಅವರ ಹಗರಣಗಳನ್ನು ಬಯಲು ಮಾಡುವುದಾಗಿ ಗೌರಿ ತಿಳಿಸಿದ್ದಾರೆ.