

ಕದಂಬ ರಂಗ ವೇದಿಕೆಗೆ ಆರು ದಶಕ ಸಂದಿರುವ ಹಿನ್ನೆಲೆಯಲ್ಲಿ ಜೂ.15 ರಿಂದ 18ರವರೆಗೆ ರಂಗಾಯಣದ ಕಿರು ರಂಗಮಂದಿರದಲ್ಲಿ ನಾಟಕೋತ್ಸವ, ವಿಚಾರಸಂಕಿರಣ, ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.
ಜೂ.1 ರಂದು ಸಂಜೆ 6.30ಕ್ಕೆ ‘ಮೈ ತೆನ್ನು ಮಿಲಾಂಗಿ’, 16 ರಂದು ಸಂಜೆ 6.30ಕ್ಕೆ ‘ಸೀತೂ ಮದುವೆ’, 17 ರಂದು ಸಂಜೆ 6.30ಕ್ಕೆ ‘ಕರಿರಾಯನ ಚರಿತೆ’, 18ರಂದು ಸಂಜೆ 6.30ಕ್ಕೆ ‘ಇರುಳು ಹಗಲಾಗುವುದರೊಳಗೆ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1963ರಲ್ಲಿ ಗೆಳೆಯರೊಡಗೂಡಿ ರಂಗವೇದಿಕೆ ಹುಟ್ಟು ಹಾಕಲಾಯಿತು. ಬಳಿಕ ಈಗಲೂ ಇದು ಸಕ್ರಿಯವಾಗಿದೆ. ದುರ್ಗಾಸ್ತಮಾನದಿಂದ ಹಿಡಿದು ಇಂದಿನ ಆಧುನಿಕ ನಾಟಕಗಳ ಪ್ರದರ್ಶನ, ನಾಟಕೋತ್ಸವ, ವಿಚಾರ ಸಂಕಿರಣಗಳು, ಶಿಬಿರಗಳು, ರಂಗಭೂಮಿಯಲ್ಲಿ ಪ್ರಶಸ್ತಿ ಪಡೆದ ಕಲಾವಿದರಿಗೆ ಸನ್ಮಾನ, ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳ ಬಿಡುಗಡೆ ಸಮಾರಂಭಗಳನ್ನು ಆಯೋಜಿಸುತ್ತಾ ಬಂದಿರುವ ವೇದಿಕೆ, ದಸರಾ ಮಹೋತ್ಸವ, ಹಂಪೆ ಉತ್ಸವ, ಕದಂಬೋತ್ಸವ, ದುರ್ಗೋತ್ಸವ, ಸಹ್ಯಾದ್ರಿ ಉತ್ಸವ ಅಲ್ಲದೆ ದೆಹಲಿ, ಮುಂಬೈ, ಚೆನ್ನೈಯಲ್ಲಿ ನಡೆದ ಕನ್ನಡ ನಾಟಕೋತ್ಸವಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡಿದೆ ಎಂದು ಮಹಿತಿ ನೀಡಿದರು.ವೇದಿಕೆಯ ಪದಾಧಿಕಾರಿಗಳಾದ ಡಿ.ತಿಪ್ಪಣ್ಣ, ಯು.ಎಸ್.ರಾಮಣ್ಣ, ಸುಬ್ಬನರಸಿಂಹ, ಸೂರಜ್ ಇದ್ದರು.