

ಮೈಸೂರು: ಬಹುಮುಖಿ ಕಲಾ ಸಂಸ್ಕೃತಿಯನ್ನು ಅನಾವರಣಗೊಳಿಸಿದ 24ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಸೋಮವಾರ ರಾತ್ರಿ ಸಡಗರದೊಂದಿಗೆ ಸಂಪನ್ನಗೊಂಡಿತು.
ಸಮಸಮಾಜದ ಕನಸುಗಾರ, ವಚನ ಚಳವಳಿಯ ನೇತಾರ ವಿಶ್ವಗುರು ಬಸವಣ್ಣನವರ ‘ಇವ ನಮ್ಮವ ಇವ ನಮ್ಮವ’ ಆಶಯದೊಂದಿಗೆ ದೇಶದ ಪ್ರತಿಷ್ಠಿತ ರೆಪರ್ಟರಿ ಸಂಸ್ಥೆಯಾದ ಮೈಸೂರು ರಂಗಾಯಣದ ವತಿಯಿಂದ 6 ದಿನಗಳ ನಡೆದ ರಂಗ ಉತ್ಸವದಲ್ಲಿ ಬಹುರೂಪದ ಬಹುಕಲೆಗಳು ಗರಿಬಿಚ್ಚಿದ್ದವು. ಕಲಾಸಕ್ತರು, ರಂಗಾಸಕ್ತರು, ಸಾರ್ವಜನಿಕರಿಗೆ ರಂಜನೆಯ ಮುದವನ್ನು ಉಣಬಡಿಸಿದವು. ಕೊನೇ ದಿನವೂ ಸಿನಿಮಾ, ನಾಟಕ, ಜಾನಪದ ಕಲೆಗಳ ಸೊಬಗು ಕಳೆಗಟ್ಟಿತ್ತು.
ಕಿಂದರಿಜೋಗಿ ಬಯಲು ವೇದಿಕೆಯಲ್ಲಿ ಉಡುಪಿಯ ಪುನೀತ್ ಮತ್ತು ತಂಡದವರು ಕರಗ ಕೋಲಾಟವನ್ನು ಸೊಗಸಾಗಿ ಪ್ರಸ್ತುತಪಡಿಸಿದರು. ಬಳಿಕ ಸುಳ್ಯಯ ಬಂಗ್ಲೆ ಗುಡ್ಡೆದ ಸುಗಿಪು ಜಾನಪದ ಕಲಾ ತಂಡದವರು ಕಂಗೀಲು ನೃತ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು.
ಕಿರುರಂಗಮಂದಿರದಲ್ಲಿ ‘ಪಾರ್ಶ್ವ ಸಂಗೀತ’ ನಾಟಕವು ಸಭಿಕರನ್ನು ರಂಜಿಸಿತು. ಪ್ರಶಾಂತ್ ಹಿರೇಮಠ ಅವರ ಸಂಗೀತ, ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿ ಬಂದ ಈ ನಾಟಕವನ್ನು ಮೈಸೂರಿನ ರಂಗವಲ್ಲಿ ತಂಡದ ಕಲಾವಿದರು ತೆರೆಯ ಮೇಲೆ ಉತ್ತಮವಾಗಿ ಪ್ರಸ್ತುತಪಡಿಸಿ ಪ್ರೇಕ್ಷಕರ ಮನಗೆದ್ದರು.
ಭೂಮಿಗೀತ ವೇದಿಕೆಯಲ್ಲಿ ‘ಅಬೋರಿಜಿನಲ್ ಕ್ರೈ’ ಸಂಭಾಷಣೆ ರಹಿತ ನಾಟಕ ವಿಶೇಷವಾಗಿ ಮೂಡಿಬಂತು. ಥೌದಮ್ ವಿಕ್ಟರ್ ಸಿಂಗ್ ಪರಿಕಲ್ಪನೆ, ವಿನ್ಯಾಸ, ನಿರ್ದೇಶನದ ಈ ನಾಟಕವನ್ನು ಮಣಿಪುರದ ಇಂಪಾಲ್ ಅಖೋಕಾ ಥಿಯೇಟರ್ ತಂಡದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಸಂಗೀತ ಲಹರಿಯೊಂದಿಗೆ ಅವರ ಮೂಕಾಭಿನಯ ಸಭಿಕರ ಮನತಟ್ಟಿತು.
ವನರಂಗದಲ್ಲಿ ‘ಬೆರಳ್ಗೆ ಕೊರಳ’ ಕನ್ನಡ ನಾಟಕ ಸಹ ಸಭಿಕರನ್ನು ರಂಜಿಸಿತು.ಕುವೆಂಪು ರಚನೆಯ ದಿನೇಶ್ ಚಮ್ಮಾಳಿಗೆ ನಿರ್ದೇಶನದ ಈ ನಾಟಕದಲ್ಲಿ ನಾಲ್ವಡಿ ಸೋಷಿಯಲ್ ಕಲ್ಚರಲ್ ಮತ್ತು ಎಜುಕೇಷನ್ ಟ್ರಸ್ಟ್‌ನ ಕಲಾವಿದರ ಅಭಿನಯವನ್ನು ರಂಗಾಸಕ್ತರು ಕಣ್ತುಂಬಿಕೊಂಡರು.
ಕಲಾಮಂದಿರದಲ್ಲಿ ‘ಕಥೆ ಎಡ್ಡೆಂಡು’ ತುಳು ನಾಟಕವೂ ಗಮನ ಸೆಳೆಯಿತು. ಜೆ.ಪಿ.ತೂಮಿನಾಡು ಅವರ ರಚನೆ, ನಿರ್ದೇಶನದಲ್ಲಿ ಮೂಡಿ ಬಂದ ನಾಟಕವನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರು ತೆರೆಯ ಮೇಲೆ ಅದ್ಭುತವಾಗಿ ಪ್ರಸ್ತುತ ಪಡಿಸಿದರು.
ಶ್ರೀರಂಗದಲ್ಲಿ ನಡೆದ ಚಲನಚಿತ್ರೋತ್ಸವ ಸಹ ಸಿನಿ ಪ್ರೇಕ್ಷಕರನ್ನು ರಂಜಿಸಿತು. ಮೈ ಅಕ್ಟೋಪಸ್ ಟೀಚರ್(ಇಂಗ್ಲಿಷ್), ಎ ಬ್ಯೂಟಿಫುಲ್ ಡೇ ಇನ್ ದಿ ನೇಬರ್‌ವುಡ್(ಇಂಗ್ಲಿಷ್), ಅರ್ಜುನ ಕನ್ನಡ ಸಿನಿಮಾ ಪ್ರದರ್ಶನಗೊಂಡವು.
ರಂಗಾಯಣದ ಆವರಣದಲ್ಲಿ ಪುಸ್ತಕ ಮೇಳ, ಕರಕುಶಲ ಮೇಳ ಹಾಗೂ ಚಿತ್ರಕಲಾ ಪ್ರದರ್ಶನ, ಲಂಕೇಶ್ ಕಲಾ ಗ್ಯಾಲರಿಯಲ್ಲಿ ಮೈಸೂರು ಶೈಲಿಯ ಪೇಟಿಂಗ್ಸ್, ಪತ್ರಗಾರ ಇಲಾಖೆಯಿಂದ ಚಾರಿತ್ರಿಕ ದಾಖಲೆಗಳು ಮತ್ತು ಹಸ್ತಪ್ರತಿಗಳ ಪ್ರದರ್ಶನ, ಕಲಾಮಂದಿರದ ಸುಚಿತ್ರ ಕಲಾಗ್ಯಾಲರಿಯಲ್ಲಿ ವಾಸ್ತವಿಕ ಚಿತ್ರಕಲಾ ಕೃತಿಗಳ ಪ್ರದರ್ಶನಕ್ಕೂ ತೆರೆಬಿದ್ದಿತು.
ರಂಗಸುಗ್ಗಿಯಲ್ಲಿ ಉತ್ತರಪ್ರದೇಶ, ಪಶ್ಚಿಮಬಂಗಾಳ, ಮಣಿಪುರ, ಕೇರಳ, ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳು, ಕನ್ನಡ ಭಾಷೆಯ 10, ತುಳು ಭಾಷೆಯ 1 ಸೇರಿದಂತೆ 17 ನಾಟಕಗಳು ಪ್ರದರ್ಶನಗೊಂಡವು.
ಮಹಿಳಾ ಆಶಯವುಳ್ಳ ಒಂದು ಯಕ್ಷಗಾನ ಈ ಸಲದ ವಿಶೇಷ ಎನಿಸಿತು. ವಿವಿಧ ಜಿಲ್ಲೆಗಳ 16 ಜಾನಪದ ಕಲಾತಂಡಗಳು ಕಿಂದರಿಜೋಗಿ ವೇದಿಕೆಯಲ್ಲಿ ಪ್ರದರ್ಶನ ನೀಡಿ ಜಾನಪದ ಕಲೆಯನ್ನು ಪರಿಚಯಿಸಿದವು. ಜತೆಗೆ, ಈ ಉತ್ಸವದ ಅಂಗವಾಗಿ ಎರಡು ದಿನ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವು ಚಿಂತನ ಮಂಥನಕ್ಕೆ ಹಚ್ಚಿತ್ತು.