

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೀವ್ ಕೇಳಿದ್ದು ಆಫೀಸ್ ಅಲ್ವಾ, ಬಂದಿದೆಯಲ್ಲ? ಇನ್ನೇನು ನಿಮ್ಮ ಸಮಸ್ಯೆ? ಕಚೇರಿಗೆ ಪೂಜೆ ಮಾಡಿ ಎಷ್ಟು ದಿನ ಆಯ್ತು ಬೀಗನೂ ತೆಗೆದಿಲ್ಲ, ಕೆಲಸನೂ ಆರಂಭಿಸಿಲ್ವಲ್ಲಾ? ದೊಡ್ಡಬಳ್ಳಾಪುರಕ್ಕೆ ಕಚೇರಿ ಬೇಕು ಅಂಥ ಎಷ್ಟು ವರ್ಷ ಹೋರಾಟ ಮಾಡಿದ್ರಿ.. ಮೂರ‌್ನಾಲ್ಕು ವರ್ಷ ಆಯ್ತು. ಈಗ ಬಂದಿದೆಯಲ್ವಾ. ಇನ್ನು ಕೆಲವು ವರ್ಷ ಹೋರಾಟ ಮಾಡಿ ಕಚೇರಿ ಆರಂಭವಾಗುತ್ತದೆ...!
ದೊಡ್ಡತುಮಕೂರು ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರು ದೊಡ್ಡಬಳ್ಳಾಪುರದ ವಾಯು ಮಾಲಿನ್ಯ ನಿಯಂತ್ರಣ ಕಚೇರಿ ಎದುರು ಇಂಥ ಸಂಭಾಷಣೆಯ ಕಿರುನಾಟಕದ ಮೂಲಕ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ತಾಳ್ಮೆ ಪರೀಕ್ಷೆ: ಗ್ರಾಮಾಂತರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ದೊಡ್ಡಬಳ್ಳಾಪುರದಲ್ಲಿ ಉದ್ಘಾಟನೆಯಾದರೂ ಇದುವರೆಗೆ ಯಾವುದೇ ಸಿಬ್ಬಂದಿ ಸುಳಿವಿಲ್ಲದೆ ಕಚೇರಿಗೆ ಬೀಗ ಹಾಕಿರುವುದು ಹೋರಾಟಗಾರರ ತಾಳ್ಮೆ ಪರೀಕ್ಷಿಸುತ್ತಿದೆ. ದೊಡ್ಡಬಳ್ಳಾಪುರದ ಹಲವು ಸಂಘಟನೆಗಳ ಹಲವು ಹೋರಾಟ, ಪ್ರತಿಭಟನೆಗಳ ಲವಾಗಿ ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆಯಾಯಿತು. ನಗರದ ಟಿ.ಬಿ.ಸರ್ಕಲ್ ನಲ್ಲಿರುವ ಲೋಕೋಪಯೋಗಿ ಕಟ್ಟಡದ ಬಾಡಿಗೆ ಕಟ್ಟಡದಲ್ಲಿ ಸಿಬ್ಬಂದಿ ಪೂಜೆ ಸಲ್ಲಿಸಿ ಕೆಲವೇ ನಿಮಿಷಗಳಲ್ಲಿ ಕಚೇರಿಗೆ ಬೀಗ ಹಾಗಿ ಹೊರಗಿನ ಗೇಟ್‌ಗೂ ಬೀಗ ಜಡಿದು ಹೋದ ಸಿಬ್ಬಂದಿ ಇದುವರೆಗೆ ಇತ್ತ ಸುಳಿದಿಲ್ಲ. ಪ್ರತಿದಿನ ಕಚೇರಿ ಬಳಿ ಬರುವುದು ಬೀಗ ತೆಗೆದಿದೆಯೇ ಎಂದು ನೋಡುವುದು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳುವುದು ಇದೇ ಆಗಿದೆ. ಹಲವು ವರ್ಷಗಳ ಒತ್ತಡಕ್ಕೆ ಕಚೇರಿ ಪೂಜೆಯ ನೆಪವಾಗಿದೆಯಷ್ಟೇ ಇದು ಇಲಾಖೆಯ ನಿರ್ಲಕ್ಷ್ಯ ಧೋರಣೆಯ ಅತಿರೇಕಕ್ಕೆ ಸಾಕ್ಷಿಯಾಗಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಜಾಲತಾಣಗಳಲ್ಲಿ ವೈರಲ್: ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರ ತಂಡವೊಂದು ಕಚೇರಿ ಎದುರು ಕಿರುನಾಟಕ ಚಿತ್ರೀಕರಿಸಿದೆ. ಇದರಲ್ಲಿ ಸದಸ್ಯರಲ್ಲಿ ಒಬ್ಬರು ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿಯಾಗಿ ನಟನೆ ಮಾಡಿದರೆ ಉಳಿದವರು ಹೋರಾಟಗಾರರ ಪಾತ್ರ ನಿರ್ವಹಿಸಿದ್ದಾರೆ. ಕಚೇರಿ ಆರಂಭಕ್ಕೆ ಹಾಕಿದ ಶ್ರಮವೆಷ್ಟು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿ ಕ್ರಮವೇನು ಎಂಬುದರ ಬಗ್ಗೆ ಸಂಭಾಷಣೆ ರೂಪದಲ್ಲಿ ಚಿತ್ರೀಕರಿಸಲಾಗಿದೆ. ಅದೇ ರೀತಿ ಅಧಿಕಾರಿಗಳು ದೊಡ್ಡಬಳ್ಳಾಪುರದ ಕಚೇರಿಗೆ ಬರಲು ಏಕೆ ಮೀನಮೇಷ ಎಣಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿ ಪಾತ್ರದಾರಿ ಸದಸ್ಯ ಮಾರ್ಮಿಕವಾಗಿ ಸಂಭಾಷಣೆ ಒಪ್ಪಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪತ್ರ ವ್ಯವಹಾರಗಳಿಗೆ ಲೆಕ್ಕವಿಲ್ಲ: ದೊಡ್ಡಬಳ್ಳಾಪುರ ವ್ಯಾಪ್ತಿಯ ಹಲವು ಕೈಗಾರಿಕೆಗಳು ಉತ್ಪತ್ತಿಯಾಗುವ ಕೊಳಚೆ ನೀರನ್ನು ಮತ್ತು ರಾಸಾಯನಿಕ ನೀರನ್ನು ಶುದ್ಧೀಕರಿಸದೆ ಜಲಮೂಲಗಳಿಗೆ ಹರಿಯಲು ಬಿಡುತ್ತಿರುವುದರಿಂದ ಈ ಭಾಗದಲ್ಲಿ ಅಂತರ್ಜಲ ವಿಷಯುಕ್ತವಾಗುತ್ತಿದೆ ಎಂಬುದರ ಬಗ್ಗೆ ವಿಡಿಯೋ ಪೊಟೋ ತುಣುಕುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಕಳುಹಿಸಿಕೊಡಲಾಗಿದೆ. ಸಾಕಷ್ಟು ಬಾರಿ ದೂರು ಅರ್ಜಿಗಳನ್ನು ಬರೆಯಲಾಗಿದೆ. ಆದರೂ ಇದುವರೆಗೆ ಸೂಕ್ತಕ್ರಮಕ್ಕೆ ಮುಂದಾಗಿಲ್ಲ ಎಂಬುದು ಹೋರಾಟಗಾರರ ಆರೋಪವಾಗಿದೆ.
ದೊಡ್ಡಬಳ್ಳಾಪುರಕ್ಕೆ ಬೆಂಗಳೂರಿನಿಂದ ವಾಯುಮಾಲಿನ್ಯ ನಿಯಂತ್ರಣ ಕಚೇರಿ ಸ್ಥಳಾಂತರಿಸಬೇಕು ಎಂದು ಹಲವು ವರ್ಷ ಹೋರಾಟ ಮಾಡಿದ್ದೇವೆ. ಇದಕ್ಕೆ ಜಿಲ್ಲಾಧಿಕಾರಿಗಳು ಸಾಕಷ್ಟು ಸಪೋರ್ಟ್ ಮಾಡಿ ಕಚೇರಿ ಉದ್ಘಾಟನೆಗೆ ನೆರವಾಗಿದ್ದಾರೆ. ಆದರೆ ಕಚೇರಿಗೆ ಪೂಜೆ ಮಾಡಿ ಹೋದ ಸಿಬ್ಬಂದಿ ಇದುವರೆಗೆ ಇತ್ತ ಕಡೆ ಸುಳಿದಿಲ್ಲ. ಪ್ರತಿನಿತ್ಯ ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ನೀರು ಜಲಮೂಗಳಿಗೆ ಸೇರ್ಪಡೆಯಾಗುತ್ತಲೇ ಇವೆ. ಈ ಬಗ್ಗೆ ಗಮನ ಸೆಳೆಯಲು ಕಿರುನಾಟಕದ ಪ್ರಯತ್ನ ಮಾಡಲಾಗಿದೆ.
ವಸಂತ್‌ಕುಮಾರ್, ದೊಡ್ಡತುಮಕೂರು ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯ