

ತುಮಕೂರು : ಸಂಗೀತ, ಸಾಹಿತ್ಯ ಎರಡೂ ಏಕಕಾಲಕ್ಕೆ ಜನರ ಮುಂದೆ ಬರುವ ನಾಟಕ ಕಲೆಗೆ ಜಿಲ್ಲೆಯ ಕೊಡುಗೆ ಆಪಾರವಾಗಿದ್ದು, ಜಿಲ್ಲೆಯ ರಂಗಭೂಮಿಗೆ ತನ್ನದೆ ಆದ ಇತಿಹಾಸವಿದೆ ಎಂದು ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ ಅಭಿಪ್ರಾಯಪಟ್ಟರು. ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಭಾನುವಾರ ನಾಟಕ ಆಕಾಡೆಮಿ, ರಂಗಸೊಗಡು ಕಲಾಟ್ರಸ್ಟ್ ಸ್ವಾಂದೇನಹಳ್ಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಂಗ ಚಾವಡಿ ಸಂವಾದದಲ್ಲಿ ಮಾತನಾಡಿದರು.
ಬೆಳ್ಳಾವೆ ನರಹರಿಶ್ರಾಸ್ತ್ರಿ, ಬೆಳ್ಳಾವೆ ವೆಂಕಟನಾರಾಯಣ ಅವರಿಂದ ಹಿಡಿದು, ಇಂದಿನ ತಲೆ ಮಾರಿನ ಯುವ ಕಲಾವಿದರವರೆಗೆ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ ನಂತರದಲ್ಲಿಯೂ ಜಿಲ್ಲೆಯ ರಂಗಭೂಮಿ ಜನಮಾನಸದಲ್ಲಿ ಉಳಿಯುವಂತಹ ಸಾಧನೆ ಮಾಡಿದೆ ಎಂದರು.
ಮೈಸೂರು, ಶಿವಮೊಗ್ಗದಲ್ಲಿ ರಂಗಾಯಣದಂತಹ ಸರ್ಕಾರಿ ಪ್ರಯೋಜಿತ ಸಂಸ್ಥೆಗಳಿದ್ದರೆ, ತುಮಕೂರು ಜಿಲ್ಲೆಯಲ್ಲಿ ನಾಟಕರತ್ನ ಡಾ.ಗುಬ್ಬಿ ವೀರಣ್ಣ ಅವರು ಕಟ್ಟಿದ ಶ್ರೀಗುರುಚನ್ನಬಸವೇಶ್ವರ ನಾಟಕ ಮಂಡಳಿ, ಚಿತ್ತರಗಿ ಗಂಗಾಧರಶಾಸ್ತ್ರಿಗಳ ಶಿಷ್ಯರಾದ ಚನ್ನಬಸಯ್ಯಗುಬ್ಬಿ ಅವರ ಅಮರ ವಿಜಯ ನಾಟಕ ಮಂಡಳಿ ಸೇರಿ ಅನೇಕ ಸಂಸ್ಥೆಗಳು ನಾಡಿನಾದ್ಯಂತ ಹೆಸರು ಮಾಡಿವೆ ಎಂದರು.
ವೀರಣ್ಣ ಅವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಹೊಸ ಹೊಸ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಹುಟ್ಟಿಕೊಳ್ಳುವುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಡಾ.ಸಣ್ಣಹೊನ್ನಯ್ಯ ಕಂಟಲಗೆರೆ ಹೇಳಿದರು.
ನಿವೃತ್ತ ಪ್ರಾದ್ಯಾಪಕ ಪ್ರೊ.ಎಸ್.ಶಶಿಕುಮಾರ್ ಮಾತನಾಡಿ, ಜಿಲ್ಲೆಯ ಅನೇಕ ಕಲಾವಿದರು ರಂಗಭೂಮಿಯ ಜತೆಗೆ, ಚಲನಚಿತ್ರ ರಂಗದಲ್ಲಿಯೂ ಬಹಳ ಹೆಸರು ಮಾಡಿದ್ದು, ಅಂತಹವರಲ್ಲಿ ಡಾ.ರಾಜಕುಮಾರ್ ಕೂಡಾ ಒಬ್ಬರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಭಕ್ತಿಯ ಜತೆಗೆ, ವೀರರ ಕಥೆಗಳನ್ನೇ ನಾಟಕದ ಕಥಾವಸ್ತುವಾಗಿಸಿಕೊಂಡಿದ್ದ ಕಥೆಗಾರರು, ಸಂಭಾಷಣೆಕಾರರು ಆಗಿದ್ದ ಬೆಳ್ಳಾವೆ ನರಹರಿಶಾಸ್ತ್ರಿಗಳ ಕೊಡುಗೆ ಆಪಾರ. ಅವರು ರಚಿಸಿದ ಹೇಮರೆಡ್ಡಿ ಮಲ್ಲಮ್ಮ, ಸತಿ ಸುಲೋಚನ ನಾಟಕಗಳು ಸಾವಿರಾರು ಪ್ರದರ್ಶನಗಳನ್ನು ಕಂಡಿವೆ.ಇಂದಿಗೂ ಪ್ರದರ್ಶನಗೊಳ್ಳುತ್ತಲೇ ಇವೆ.ಅದೇ ರೀತಿ ಭೌತಶಾಸ್ತ್ರದ ಉಪನ್ಯಾಸಕ ರಾಗಿದ್ದ ಬೆಳ್ಳಾವೆ ವೆಂಕಟ ನಾರಾಯಣ ಅವರು ಕಟ್ಟಿದ್ದ ಕನ್ನಡ ಸಂಘ ನಾಡಿನೆಲ್ಲಡೆ ಹೆಸರು ಮಾಡಿತ್ತು ಎಂದರು.
ಕಲಾವಿದರಾದ ಜಿ.ಎಸ್.ಗುರು, ಸಂಪನ್ಮೂಲ ವ್ಯಕ್ತಿಗಳಾದ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ,ಪ್ರೊ.ಎಸ್, ಶಶಿಕುಮಾರ್,ಡಾ.ಓ.ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಸ್ವಾಂದೇನಹಳ್ಳಿಯ ಸಿದ್ದರಾಜು, ರಂಗನಿರ್ದೇಶಕ ಕಾಂತರಾಜು ಕೌತುಮಾರನಹಳ್ಳಿ ಇದ್ದರು.
ಸಂಗೀತಕ್ಕೆ ಹೆಚ್ಚಿನ ಪ್ರಾಧ್ಯಾನತೆ : ಭಾರತದ ರಂಗಕಲೆಯಲ್ಲಿ ನಾಟ್ಯಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ದೊರೆತರೆ, ಕನ್ನಡ ರಂಗಭೂಮಿಯಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧ್ಯಾನತೆ ಇದೆ. ಹಾಗಾಗಿ ಹಿರಿಯರು ರಚಿಸಿರುವ ನಾಟಕಗಳು ಹೆಚ್ಚು ಸಂಗೀತಮಯವಾಗಿರುವುದನ್ನು ನಾವು ಕಾಣಬಹುದು ಎಂದು ನಾಟಕಕಾರ, ಸಹ ಪ್ರಾಧ್ಯಾಪಕ ಡಾ.ಓ.ನಾಗರಾಜು ಹೇಳಿದರು. ತುಮಕೂರು ಭಾಗದಲ್ಲಿ ಇಂದಿನ ಸಾಮಾಜಿಕ ಸ್ಥಿತಿಗತಿಗಳನ್ನೇ ಕಥಾ ವಸ್ತುವಾಗಿಸಿಕೊಂಡಿರುವ ಸಾಮಾಜಿಕ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ, ಇದು ಜನರನ್ನು ಜೀವಮುಖಿಯಾಗಿದೆ ಎಂದರು.
ಕರ್ನಾಟಕದ ಅತ್ಯುತ್ತಮ ಕಥೆಗಳನ್ನು ಅಕಾಡೆಮಿ ವತಿಯಿಂದ ಆಯೋಜಿಸಿರುವ ಹೊರ ರಾಜ್ಯ,ಗಡಿನಾಡು ನಾಟಕ ಉತ್ಸವಗಳಲ್ಲಿ ಪ್ರದರ್ಶಿಸಬೇಕೆಂಬ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿ ಇದು ಸಕಾರಗೊಳ್ಳಲಿದೆ. ಟಿ.ಎಸ್.ಸದಾಶಿವಯ್ಯ ನಾಟಕ ಅಕಾಡೆಮಿ ಸದಸ್ಯ