

ಹೊಳೆನರಸೀಪುರ: ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿದ ಪರಿಣಾಮ ನೀರಿಲ್ಲದೆ ತಾಲೂಕಿನ ಕೆರೆಕಟ್ಟೆಗಳು ಬರಿದಾಗಿದ್ದು, ಜನ-ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ.
ಕೆರೆಕಟ್ಟೆಗಳಲ್ಲಿ ನೀರು ಸಂಪೂರ್ಣ ಸಂಗ್ರಹವಾಗದೆ ಕಾಡುಪ್ರಾಣಿ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುತ್ತಿವೆ. ಮುಂಗಾರು ಮಳೆಯ ಪ್ರಮಾಣ ವಾಡಿಕೆಗಿಂತ ಸಂಪೂರ್ಣ ಕುಸಿತ ಕಂಡಿರುವುದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಮಳೆಗಾಲದ ಸಮಯದಲ್ಲಿ ಇಷ್ಟೊಂದು ಭೀಕರತೆ ತಲೆದೋರಿದ್ದು, ಮುಂಬರುವ ಬೇಸಿಗೆ ದಿನಗಳಲ್ಲಿ ಸಮಸ್ಯೆಗಳನ್ನು ಊಹಿಸಲು ಅಸಾಧ್ಯವಾಗಿದೆ. ಮಳೆರಾಯನ ಆಟಕ್ಕೆ ಜೀವಸಂಕುಲ ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷ ಪೂರ್ವ ಮುಂಗಾರು, ಮುಂಗಾರು ಮಳೆಯ ಆರ್ಭಟದಿಂದ ಸಂಕಷ್ಟ ಅನುಭವಿಸಿದ್ದ ರೈತರು, ಈ ವರ್ಷ ಮಳೆಯ ಕೊರತೆಯಿಂದ ಆಕಾಶವನ್ನೇ ನೋಡುವಂತಾಗಿದೆ.
ತಾಲೂಕಿನ ಬಹುತೇಕ ಕೆರೆಕಟ್ಟೆಗಳು ನೀರಿಲ್ಲದೆ ಭಣಗುಡುತ್ತಿದ್ದು, ಬಂಜರು ಭೂಮಿಯಾಗಿ ಮಾರ್ಪಟ್ಟಿವೆ. ತಾಲೂಕಿನ ಕಸಬಾ, ಹಳೆಕೋಟೆ ಹಾಗೂ ಹಳ್ಳಿಮೈಸೂರು ಹೋಬಳಿ ವ್ಯಾಪ್ತಿಯ ಕೆರೆಕಟ್ಟೆಗಳು ಬರಿದಾಗುತ್ತಿವೆ. ಬಹುತೇಕ ಕೆರೆಗಳು ಮಳೆಯ ನೀರನ್ನೇ ಅವಲಂಬಿಸಿವೆ. ಇನ್ನುಳಿದ ಹಲವು ಕೆರೆಕಟ್ಟೆಗಳು ನೀರಾವರಿ ವ್ಯಾಪ್ತಿಗೆ ಒಳಪಟ್ಟಿವೆ. ಹೇಮಾವತಿ ಎಡದಂಡೆ ನಾಲೆ, ಬಲದಂಡೆ ನಾಲೆ ಉಪ ವಿಭಾಗ, ಹೇಮಾವತಿ ಬಲ ಮೇಲ್ದಂಡೆ ನಾಲೆ ಹೈ ಲೆವೆಲ್, ಹುಚ್ಚನಕೊಪ್ಪಲು, ಕಾಮಸಮುದ್ರ ಮತ್ತು ಗುಡ್ಡೇನಹಳ್ಳಿ ಏತ ನೀರಾವರಿ ಘಟಕಗಳಿಂದ ಹಲವು ಕೆರೆಕಟ್ಟೆಗಳಿಗೆ ನೀರು ತುಂಬಿಸಲಾಗುತ್ತದೆ.
ಹಳ್ಳಿಮೈಸೂರು ಹೋಬಳಿ ಕಡಿಮೆ ನೀರಾವರಿ ಪ್ರದೇಶ ಹೊಂದಿದ್ದು, ಈ ಭಾಗದ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ತಾಲೂಕಿನ ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆಕಟ್ಟೆಗಳು ಸಹ ಸಂಪೂರ್ಣ ಭರ್ತಿಯಾಗಿಲ್ಲ. ಶೇ.40ರಷ್ಟು ಭರ್ತಿಯಾಗಿರುವ ಈ ಭಾಗದ ಕೆರೆಗಳನ್ನು ಅವಲಂಬಿಸಿರುವ ರೈತರು, ಕೃಷಿ ಚಟುವಟಿಕೆಯನ್ನು ಕೈಗೊಳ್ಳುವಲ್ಲಿ ಆತಂಕ ಮೂಡಿಸಿದೆ.