

ಮುಳಗುಂದ: ಪಟ್ಟಣದ ಪುರಾತನ ಅನ್ನದಾನೇಶ್ವರ ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆಗೆ ಚರಂಡಿ ನೀರು ಅಡ್ಡಿಯಾಗಿದೆ.
ದೇವಸ್ಥಾನದ ಆವರಣದಲ್ಲಿ ಹರಿಯುವ ಚರಂಡಿ ನೀರಿನಿಂದ ದುರ್ನಾತ ಹರಡುತ್ತಿದೆ. ದೇವಸ್ಥಾನ ಆವರಣ ಮತ್ತು ಸುತ್ತಲಿನ ಪ್ರದೇಶ ಮಲಿನಗೊಳ್ಳುತ್ತಿದೆ.
ಇದರಿಂದ ಅಕ್ಕಪಕ್ಕದ ನಿವಾಸಿಗಳು, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಸೊಳ್ಳೆಗಳ ಕಾಟಕ್ಕೆ ಜನ ಬೇಸತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಸಾರ್ವಜನಿಕರ ಒತ್ತಡ ಹೆಚ್ಚಿದಾಗ ಸ್ಥಳ ಪರಿಶೀಲನೆಗೆ ಆಗಮಿಸುವ ಅಧಿಕಾರಿಗಳು, ಸೂಕ್ತ ಚರಂಡಿ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಭರವಸೆ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ನಾಗರಿಕರು ದೂರುತ್ತಿದ್ದಾರೆ.
ಒಂದೆಡೆ ಪ್ರಾಚ್ಯ ವಸ್ತು ಇಲಾಖೆ ವತಿಯಿಂದ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಕಾಮಗಾರಿಗೆ ಚರಂಡಿ ನೀರು ಅಡ್ಡಿಯಾಗಿದೆ.
ಸಾರ್ವಜನಿಕರು ಮನೆಯ ಕಸವನ್ನು ದೇವಸ್ಥಾನದ ಜಾಗದಲ್ಲಿಯೇ ಸುರಿಯುತ್ತಿದ್ದಾರೆ. ದೇವಸ್ಥಾನದ ಮುಂಭಾಗದ ಜಾಗದಲ್ಲಿ ಈಜುಗೊಳ ನಿರ್ಮಾಣಕ್ಕೆ ಶಾಸಕ ಎಚ್.ಕೆ. ಪಾಟೀಲರು ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ, ಈವರೆಗೆ ಕಾಮಗಾರಿ ಕೈಗೊಂಡಿಲ್ಲ. ಈಗ ಆ ಜಾಗ ಕಸ ಸುರಿಯುವವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಅಲ್ಲದೆ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಾಗಿದೆ.
ದೇವಸ್ಥಾನಕ್ಕೆ ಅರ್ಚಕರು ಇಲ್ಲದಿರುವುದು ದುರದೃಷ್ಟಕರ ಸಂಗತಿ. ಪಕ್ಕದಲ್ಲಿ ಮನೆ ಮಾಡಿಕೊಂಡಿರುವ ಸ್ವಾಮೀಜಿಯೊಬ್ಬರು ಪೂಜೆ-ಪುನಸ್ಕಾರ ನೆರವೇರಿಸುತ್ತಿದ್ದಾರೆ. ಸರ್ಕಾರವು ಕೂಡಲೇ ಅರ್ಚಕರೊಬ್ಬರನ್ನು ನೇಮಕ ಮಾಡಬೇಕಿದೆ. ಇಲ್ಲವಾದಲ್ಲಿ ದೇವಸ್ಥಾನಕ್ಕೆ ಕೋಟ್ಯಂತರ ರೂ. ವ್ಯಯಿಸಿದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂಬುದು ನಾಗರಿಕರ ಅಭಿಪ್ರಾಯ.
ಸರ್ಕಾರವು ಕೋಟ್ಯಂತರ ರೂಪಾಯಿ ವ್ಯಯಿಸಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದೆ. ಸುತ್ತಮುತ್ತಲಿನ ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ದೇವಸ್ಥಾನ ಆವರಣದಲ್ಲಿ ಚರಂಡಿ ನೀರು ಹರಿಯದಂತೆ ಪಟ್ಟಣ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕು. ಚರಂಡಿ ನಿರ್ಮಿಸಿ ದೇವಸ್ಥಾನದ ಸುತ್ತಲೂ ಸ್ವಚ್ಛತೆ ಕಾಪಾಡಬೇಕು.ಜಗದೀಶ, ಎಇಇ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಧಾರವಾಡ