

ಹನುಮಸಾಗರ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಆರಂಭವಾದ ಮಳೆ ಸೋಮವಾರ ಮಧ್ಯಾಹ್ನದ ಬಳಿಕ ಮುಂದುವರಿಯಿತು. ಉತ್ತಮ ಮಳೆ ಸುರಿದಿದ್ದರಿಂದ ಹಳ್ಳಗಳು ತುಂಬಿ ಹರಿದಿದ್ದು, ಭಾನುವಾರ ರಾತ್ರಿಯಿಂದ ನಿರಂತರವಾಗಿ ಹರಿಯುತ್ತಲೇ ಇವೆ.
ಪಟ್ಟಣದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿದ್ದರಿಂದ ಕೆಲವು ವಾರ್ಡ್‌ಗಳಲ್ಲಿ ಹಾಗೂ ಸಮೀಪದ ಹನುಮನಾಳ ಗ್ರಾಮದ ಸರ್ಕಾರಿ ಆಸ್ಪತ್ರೆ, ವಿವೇಕಾನಂದ ನಗರ, ಹನುಮಸಾಗರ ರಸ್ತೆಯ ಅಂಗಡಿ ಮುಂಗಟ್ಟುಗಳು, ಗುರು ಗಂಗಾಧರೇಶ್ವರ ಸಂಗೀತ ಶಾಲೆ, ಹೊಸ ಗ್ರಾಪಂ ಕಚೇರಿ ಸುತ್ತ ಕೆಲ ಮನೆಗಳಿಗೆ ನೀರು ನುಗ್ಗಿದೆ. ಬಾದಿಮನಾಳ ಗ್ರಾಮದಲ್ಲಿ ಕೆಲ ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ನಿವಾಸಿಗಳು ಹರಸಾಹಸಪಟ್ಟರು.
ಸಮೀಪದ ಗಡಚಿಂತಿ ಗ್ರಾಮದ ಚಂದ್ರಪ್ಪ ಕರಹೋಳಿ ಅವರ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಭಾನುವಾರ ರಾತ್ರಿ ಭಾರಿ ಮಳೆ ಸುರಿದಿದ್ದರಿಂದ ಕೃಷಿ ಹೊಂಡಗಳು ತುಂಬಿದ್ದು, ಸೋಮವಾರ ಬೆಳಗ್ಗೆ 10ರವರೆಗೆ ಬಿಡುವು ನೀಡಿದ್ದ ಮಳೆ ಮತ್ತೆ ಮಧ್ಯಾಹ್ನದ ವೇಳೆಗೆ ಸುರಿಯಲು ಪ್ರಾರಂಭವಾದ್ದರಿಂದ ಜಾನುವಾರುಗಳನ್ನು ಮೇಯಿಸಲು ತೊಂದರೆಯಾಯಿತು.
ಭೋರ್ಗರೆದ ಕಪಿಲ ತೀರ್ಥ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ಕಪಿಲ ತೀರ್ಥ ಜಲಪಾತ ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜುಲೈ ತಿಂಗಳ ಕೊನೇ ವಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಳುತ್ತಿದ್ದ ಜಲಪಾತ, ಸೋಮವಾರ ಬೆಳಗ್ಗೆಯಿಂದ ಭೋರ್ಗರೆಯುತ್ತಿದೆ.
ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿರುವ ಈ ಜಲಪಾತ, ಕಬ್ಬರಗಿ ಸಮೀಪದ ಬೆಟ್ಟದ ಮಧ್ಯದಲ್ಲಿ ಇದೆ. ಸುಮಾರು 25 ಅಡಿ ಎತ್ತರದಿಂದ ನೀರು ಬೀಳುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.