ರಸ್ತೆಯಲ್ಲಿ ಹರಿಯುವ ಚರಂಡಿ ನೀರು: ಪೇಟೆಯುದ್ದಕ್ಕೂ ಜನರಿಗೆ ಕೆಸರಿನ ಸಿಂಚನ

HBR 11 JULY 01.A
Published on

ನರೇಂದ್ರ ಎಸ್. ಮರಸಣಿಗೆ

ಹೆಬ್ರಿ: ಹೆಬ್ರಿ ಪೇಟೆಯುದ್ದಕ್ಕೂ ಮಳೆ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ಕೆಸರಿನ ಸಿಂಚನವಾಗುತ್ತಿದೆ. ಹಲವೆಡೆ ಸಮರ್ಪಕವಾದ ಚರಂಡಿ ಇಲ್ಲದಿರುವುದರಿಂದ ಮಳೆನೀರು ಹಳ್ಳದ ರೀತಿ ರಸ್ತೆಯಲ್ಲಿ ಹರಿಯುತ್ತದೆ. ಈ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯವರನ್ನು ಊರಿನ ಜನತೆ ಆಗ್ರಹಿಸಿದ್ದಾರೆ.

ಹೆಬ್ರಿ ಪೇಟೆಯ ಸ್ಟೇಟ್‌ಬ್ಯಾಂಕ್ ಎದುರು, ಪೊಲೀಸ್ ಸ್ಟೇಷನ್ ಮುಂಬಾಗ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಬಳಿ, ಕೆಳಪೇಟೆ, ತಾಲೂಕು ಆಫೀಸ್ ಮುಂಭಾಗ, ಬ್ಯಾಂಕ್ ಆಫ್ ಬರೋಡ ಮುಂಭಾಗ, ಸರ್ಕಾರಿ ಆಸ್ಪತ್ರೆ ಹತ್ತಿರ, ಮೂರು ರಸ್ತೆಯಲ್ಲಿ ಹಾಗೂ ರಾಘವೇಂದ್ರ ಮಠದ ಬಳಿ ಮದಗದ ನೀರು ರಸ್ತೆಯಲ್ಲಿ ಹರಿದು ದಾರಿಹೋಕರಿಗೆ ಸಮಸ್ಯೆಯಾಗುತ್ತಿದೆ.

ರಸ್ತೆಯಲ್ಲಿ ಓಡಾಡುವವರಿಗೆ ಕೆಸರಿನ ಸಿಂಚನ : ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಎದುರು ಚರಂಡಿ ನೀರು ಪ್ರವಾಹದಂತೆ ಹರಿದು ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವಾಗ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೆಸರಿನ ಸಿಂಚನವಾಗುತ್ತಿದೆ. ಪೊಲೀಸ್ ಸ್ಟೇಷನ್‌ನಿಂದ ವ್ಯವಸಾಯ ಸೇವಾ ಸಹಕಾರಿಯ ಮುಂಭಾಗದ ತನಕ ಸಮರ್ಪಕವಾದ ಚರಂಡಿ ಇಲ್ಲ.

ಒಳಚರಂಡಿ ಸರಿಯಿಲ್ಲ: ಈಗಾಗಲೇ ಪೇಟೆಯ ಕೆಲವೆಡೆ ಚರಂಡಿಯನ್ನು ದುರಸ್ತಿಪಡಿಸಿದ್ದರೂ ಸಮರ್ಪಕ ಒಳಚರಂಡಿಯ ಕೊರತೆ ಹಾಗೂ ಹೂಳು ತೆಗೆಯದೆ ಇರುವುದರಿಂದ ಮಳೆನೀರು ರಸ್ತೆಯಲ್ಲಿ ಹರಿಯುತ್ತಿದೆ. ಅನೇಕ ಕಡೆಯಲ್ಲಿ ಚರಂಡಿಯೇ ಇಲ್ಲ. ಕೆಲವೆಡೆ ಹೆಬ್ರಿ ಗ್ರಾಮ ಪಂಚಾಯಿತಿಯವರು ಮಣ್ಣು ಹಾಕಿ ತಗ್ಗು ಜಾಗವನ್ನು ಸಮತಟ್ಟು ಮಾಡಿದ್ದರು.ಆದರೆ ಮಳೆಗಾಲದಲ್ಲಿ ಮಣ್ಣಿನ ಮೇಲೆ ಭಾರಿ ಗಾತ್ರದ ವಾಹನಗಳು ಸಂಚರಿಸಿದಾಗ ಮಣ್ಣು ಕೆಸರಿನ ರಾಡಿಯಾಗುತ್ತದೆ.

ಕಿತ್ತುಹೋದ ಡಾಂಬರು: ಕಾರ್ಕಳ ಉತ್ಸವ ಸಂದರ್ಭದಲ್ಲಿ ರಸ್ತೆಗೆ ಡಾಂಬರು ಹಾಕಿದ್ದರು.ವಿಪರೀತ ಮಳೆಗೆ ರಸ್ತೆಯ ಕೆಲವೆಡೆ ಡಾಂಬರು ಕಿತ್ತುಹೋಗಿದೆ. ಎರಡೇ ತಿಂಗಳಲ್ಲಿ ಈ ರಸ್ತೆ ಹದಗೆಟ್ಟಿರುವುದಕ್ಕೆ ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿಬರುತ್ತಿವೆ.

ಹೆಬ್ರಿಯ ಪೇಟೆಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕೆಲವು ರಸ್ತೆಗಳು ಪಿಡಬ್ಲ್ಯುಡಿ ಇಲಾಖೆ ನಿಯಂತ್ರಣದಲ್ಲಿ ಇರುವುದರಿಂದ ಹೆದ್ದಾರಿಯವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುವಾಗ ಸಮರ್ಪಕ ಚರಂಡಿ ನಿರ್ಮಿಸುತ್ತೇವೆ ಎನ್ನುತ್ತಾರೆ. ಅಲ್ಲಿಯತನಕ ಸಾರ್ವಜನಿಕರಿಗೆ ಗೋಳು ತಪ್ಪಿದ್ದಲ್ಲ.

ಹೆಬ್ರಿ ಪಂಚಾಯಿತಿಯವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ಸಮರ್ಪಕ ಚರಂಡಿ ನಿರ್ವಹಣೆಯ ಕುರಿತು ಪತ್ರವನ್ನು ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಂಚಾಯತಿಯವರು ಮುತುವರ್ಜಿ ವಹಿಸಿ ಕೆಲವೆಡೆ ಜೆಸಿಬಿ ಮೂಲಕ ಚರಂಡಿ ದುರಸ್ತಿಪಡಿಸುತ್ತಿದ್ದಾರೆ.

ಹೆಬ್ರಿ ಪೇಟೆಯಲ್ಲಿ ಒಳ ಚರಂಡಿ ಸಮಸ್ಯೆಯಿಂದ ಇತ್ತೀಚೆಗೆ ನಿರ್ಮಾಣಗೊಂಡ ರಸ್ತೆಗಳು ಹಾಳಾಗುತ್ತಿವೆ.ರಸ್ತೆಗಳ ಮೇಲೆ ನೀರು ಹರಿದು ಹೋಗುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಇಂತಹ ಪರ್ಸೆಂಟೇಜ್ ಹಾಗೂ ಕಳಪೆ ಕಾಮಗಾರಿಯಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಹಣವ್ಯರ್ಥ ಮಾಡುತ್ತಿದ್ದಾರೆ ಜನಪ್ರತಿನಿಧಿಗಳು.

ಕುಚ್ಚೂರು ಶ್ರೀಕಾಂತ್ ಪೂಜಾರಿ, ಅಧ್ಯಕ್ಷರು, ಜೆಡಿಎಸ್ ಕಾರ್ಕಳ

ಕೆಲವೊಮ್ಮೆ ವಿಪರೀತ ಮಳೆಯಾಗಿ ಚರಂಡಿ ಗಾತ್ರಕ್ಕಿಂತ ಹೆಚ್ಚಾಗಿ ನೀರು ಬರುವಾಗ ಈ ಸಮಸ್ಯೆ ಎದುರಾಗುತ್ತದೆ. ನಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಚರಂಡಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಲಾಯ್ಡ್ ಸಂದೀಪ್ ಡಿಸಿಲ್ವ, ಜೂನಿಯರ್ ಇಂಜಿನಿಯರ್, ಪಿಡಬ್ಲ್ಯೂಡಿ, ಕಾರ್ಕಳ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net