ಶುದ್ಧ ನೀರು ಹಾಳುಗೆಡವಿದ ಚರಂಡಿ ಅವ್ಯವಸ್ಥೆ

d4rainage
Published on

ಉಡುಪಿ: ಚರಂಡಿ ಅವ್ಯವಸ್ಥೆಯಿಂದ ನಗರದ ಡ್ರೈನೇಜ್ ನೀರು ರಾಷ್ಟ್ರೀಯ ಹೆದ್ದಾರಿ ಆ್ಯಬ್ಕೋ ಸ್ಟೀಲ್ ಸಮೀಪ ಕಪ್ಪೆಟ್ಟು ಪರಿಸರದಲ್ಲಿ ಹರಡಿ ಹಲವಾರು ಬಾವಿಗಳು ಕಲುಷಿತಗೊಂಡಿವೆ. ಈಗಾಗಲೆ ಶೇ.70ಕ್ಕೂ ಅಧಿಕ ಬಾವಿಗಳನ್ನು ಚರಂಡಿ ತ್ಯಾಜ್ಯ ನೀರು ಕಬಳಿಸಿದ್ದು, ಉಳಿದ ಶೇ.30ಕ್ಕೂ ಶುದ್ಧ ನೀರು ಚರಂಡಿ ನೀರಿಗೆ ಬಲಿಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಪರಿಸರದ ಜನ ದಿನದ 24 ಗಂಟೆ ಮೂಗು ಬಾಯಿ ಮುಚ್ಚಿಕೊಂಡೇ ಬದುಕಬೇಕಾದ ಪರಿಸ್ಥಿತಿ, ಆರೋಗ್ಯ ಭೀತಿ ಬಗ್ಗೆ ವಿಜಯವಾಣಿ ಈ ಹಿಂದೆ ವಿಸ್ತೃತ ವರದಿ ಪ್ರಕಟಿಸಿತ್ತು. ಇಷ್ಟಾದರೂ ನಗರಸಭೆ ಎಚ್ಚೆತ್ತುಕೊಳ್ಳದೆ ಎರಡು ದಿನಗಳ ಹಿಂದಷ್ಟೆ ಕಿನ್ನಿಮೂಲ್ಕಿ ಆ್ಯಬ್ಕೋ ಸ್ಟೀಲ್ ಬಳಿ ಡ್ರೈನೈಜ್ ನಿರ್ವಹಣಾ ಘಟಕ(ವೆಟ್‌ವೆಲ್-2) ಸರಿಪಡಿಸಿದೆ. ಪಂಪ್ ಸರಿಪಡಿಸಿದ ಕಾರಣ ಪ್ರಸಕ್ತ ಉಕ್ಕೇರಿದ ಚರಂಡಿ ನೀರು ಖಾಲಿಯಾಗಿದ್ದರೂ, ಪರಿಸರದಲ್ಲಿ ದುರ್ವಾಸನೆ, ಅಂತರ್ಜಲ ಒಳಗೆ ಚರಂಡಿ ನೀರು ಸೇರಿ ಪರಿಸರದ ಬಾವಿಗಳೆಲ್ಲ ಕಲುಷಿತಗೊಂಡಿದೆ.

ಸೊಳ್ಳೆ ಉತ್ಪಾದನಾ ಕೇಂದ್ರ: ಚರಂಡಿ ಅವ್ಯವಸ್ಥೆಯಿಂದ ಪರಿಸರ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ರೂಪುಗೊಂಡಿದೆ. ಊರೆಲ್ಲ ಸೊಳ್ಳೆ ಹಾವಳಿಯಿಂದ ಜನ ಆತಂಕದಲ್ಲಿದ್ದಾರೆ. ಪರಿಸರದಲ್ಲಿ ನಗರಸಭೆ ನೀರು ಆಶ್ರಯಿಸದೆ ಶುದ್ಧ ಬಾವಿ ನೀರನ್ನೆ ಬಳಕೆ ಮಾಡುತ್ತಿದ್ದರು. ಆದರೀಗ ಎಲ್ಲ ಬಾವಿಗಳು ಕಲುಷಿತಗೊಳ್ಳಲು ಆರಂಭಿಸಿದ್ದು, ಪರಿಸರ ಅಂತರ್ಜಲ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪರಿಸರದಲ್ಲಿ ಕೆಲವು ಮಂದಿಗೆ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿದೆ.

ಹಳೇ ಪಂಪು ಚಾಲೂ: ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಡ್ರೈನೇಜ್ ನಿರ್ವಹಣಾ ಘಟಕ ವೆಟ್‌ವೆಲ್-2 ಸಂಪೂರ್ಣ ಪಾಳು ಬಿದ್ದಿತ್ತು. ಪಂಪ್ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಮಂಗಳೂರಿನಿಂದ ರಿಪೇರಿ ಮಾಡುವವರನ್ನು ಕರೆ ತಂದು ಮಂಗಳವಾರ ಪಂಪ್ ರಿಪೇರಿ ಮಾಡಿಸಲಾಗಿದೆ. ಪಂಪ್ ಕಾರ್ಯನಿರ್ವಹಿಸದ ಪರಿಣಾಮ ಇಷ್ಟು ದಿನ ಜನರು ಹೈರಾಣಾಗುವಂತಾಗಿತ್ತು. ಈ ಮೊದಲೇ ಪಂಪ್ ರಿಪೇರಿಯಾಗಿದ್ದರೆ ಶುದ್ಧ ನೀರಿನ ಕೆಲವು ಬಾವಿಗಳನ್ನಾದರೂ ಉಳಿಸಬಹುದಿತ್ತು ಎಂದು ಇಲ್ಲಿನವರ ಅಭಿಪ್ರಾಯ. ಸದ್ಯ ಹಳೆಯ ಪಂಪ್ ರನ್ ಮಾಡುತ್ತಿದ್ದಾರೆ, ಇದು ಹೆಚ್ಚು ದಿನ ಬಾಳಿಕೆ ಬರುವುದು ಅನುಮಾನ. ಮತ್ತೆ ಹಳೇ ಸಮಸ್ಯೆ ಮುಂದುವರಿಯುವ ಸಾಧ್ಯತೆ ಎನ್ನುತ್ತಾರೆ ಸ್ಥಳೀಯರು.

ವೆಟ್‌ವೆಲ್-2 ತಾಂತ್ರಿಕ ಸಮಸ್ಯೆಯಿಂದ ಡ್ರೈನೇಜ್ ನೀರು ತೋಡಿನಲ್ಲಿ ಹರಿಯುತಿತ್ತು. ಪ್ರಸಕ್ತ ಪಂಪ್ ಘಟಕವನ್ನು ರಿಪೇರಿ ಮಾಡಿಸಲಾಗಿದೆ. ಚರಂಡಿ ಸ್ವಚ್ಛತೆ ಕಾರ್ಯ ನಡೆಸಲಾಗಿದೆ.

ಮೋಹನ್‌ರಾಜ್, ಎಇಇ, ಉಡುಪಿ ನಗರಸಭೆ

ವೆಟ್‌ವೆಲ್-2 ಅವ್ಯವಸ್ಥೆಯಿಂದಾಗಿ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ. ಘಟಕ ಪಂಪನ್ನು ಸರಿಪಡಿಸಿದ್ದಾರೆ. ಪ್ರಸಕ್ತ ಪಂಪು ಕಾರ್ಯನಿರ್ವಹಿಸುತ್ತಿದ್ದು, ಚರಂಡಿಯಲ್ಲಿದ್ದ ನೀರು ಖಾಲಿಯಾಗಿದೆ. ಕೊನೆಗೂ ನಮ್ಮ ಪರಿಸರದ ಬಾವಿಗಳನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ. ನಮ್ಮ ಮನೆಯ ಶುದ್ಧ ನೀರಿನ ಬಾವಿಗೆ ಡ್ರೈನೇಜ್ ನೀರು ಸೇರಿಕೊಂಡಿದೆ.

ಕಾರ್ತಿಕ್, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net