ಹೂಳು ತೆರವು ಸಮಯ ಬಂದಿದೆ

kaluve
Published on

ಭರತ್ ಶೆಟ್ಟಿಗಾರ್ ಮಂಗಳೂರು

ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ನಗರ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರಲ್ಲಿ ನಡುಕ ಆರಂಭವಾಗುತ್ತದೆ. ಕಾರಣ ರಾತ್ರಿ-ಹಗಲು ಎನ್ನದೆ ಯಾವಾಗ ಬೇಕಾದರೂ ಉಂಟಾಗುವ ಕೃತಕ ನೆರೆ. ರಾಜಕಾಲುವೆ ಮತ್ತು ಅದನ್ನು ಸಂಪರ್ಕಿಸುವ ಸಣ್ಣ ತೋಡುಗಳಲ್ಲಿ ಹೂಳು ತುಂಬಿ ಈ ನೆರೆ ಉಂಟಾಗುತ್ತದೆ. ಪ್ರತಿವರ್ಷ ಒಂದಲ್ಲಾ ಒಂದು ಭಾಗದಲ್ಲಿ ಕೃತಕ ನೆರೆ ಕಾಡುವುದು ಸಾಮಾನ್ಯವಾಗಿದೆ.

ಜಿಲ್ಲೆಯಲ್ಲಿ ಪೂರ್ವಮುಂಗಾರು ಮಳೆಯ ಅಬ್ಬರ ಈಗಾಗಲೇ ಆರಂಭವಾಗಿದ್ದು, ಮಂಗಳೂರು ನಗರಕ್ಕೂ ಮಳೆ ಕಾಲಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಂದೆರಡು ಗಂಟೆಗಳ ಅಬ್ಬರದ ಮಳೆ ತಗ್ಗು ಪ್ರದೇಶ ಮುಳುಗಲು ಸಾಕು. 2018ರ ಮೇ 29ರಂದು ಸುರಿದ ಕೆಲವೇ ಗಂಟೆಗಳ ಮಳೆಗೆ ಮಂಗಳೂರು ನಗರ ಭಾಗಶಃ ಮುಳುಗಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಇದಕ್ಕೆ ಕಾರಣ ರಾಜಕಾಲುವೆ ಹೂಳು ತೆರವು ಮಾಡದಿದ್ದುದು. ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಜಕಾಲುವೆ ಹೂಳು ತೆರವು ಸಹಿತ ಮಳೆಗಾಲಕ್ಕೆ ಸಿದ್ಧತೆ ನಡೆಸುವುದನ್ನು ನಿರ್ಲಕ್ಷಿಸಿದ್ದರು. ಆದರೆ ಸದ್ಯ ಅಂತಹ ಯಾವುದೇ ತುರ್ತು ಕೆಲಸಗಳಿಲ್ಲ. ರಾಜಕಾಲುವೆ, ತೋಡು, ಚರಂಡಿಗಳ ಹೂಳು ತೆರವಿಗೆ ಆದ್ಯತೆ ನೀಡಬೇಕಿದೆ.

ತುಂಬಿದೆ ಹೂಳು, ತ್ಯಾಜ್ಯ: ಕಳೆದ ವರ್ಷ ಮಳೆಗಾಲಕ್ಕೆ ಮುನ್ನ ಹೂಳು ತುಂಬಿದ್ದ ರಾಜಕಾಲುವೆ, ತೋಡುಗಳ ಹೂಳು ತೆರವುಗೊಳಿಸಲಾಗಿತ್ತು. ಆ ಬಳಿಕ ಮಳೆಗಾಲದಲ್ಲಿ ಉತ್ತಮ ಮಳೆಯಾಗಿದ್ದು, ಮತ್ತೆ ಸಾಕಷ್ಟು ಪ್ರಮಾಣದಲ್ಲಿ ಹೂಳು ಸಂಗ್ರಹಗೊಂಡಿದೆ. ಪರಿಣಾಮ ಆಗಸ್ಟ್ ತಿಂಗಳಲ್ಲಿ ಕೃತಕ ನೆರೆಯೂ ಉಂಟಾಗಿತ್ತು. ಪ್ರಸ್ತುತ ಒಂದು ವರ್ಷದ ಹೂಳು, ಕೆಸರು, ತ್ಯಾಜ್ಯ ತುಂಬಿದೆ. ಜತೆಗೆ ಆಳೆತ್ತರದ ಹುಲ್ಲು ಪೊದೆಗಳೂ ಕಾಲುವೆಯಲ್ಲಿ ಬೆಳೆದಿವೆ. ಅವನ್ನೆಲ್ಲ ತೆಗೆದು ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಕಾಲುವೆ ನದಿ ಸೇರುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಸರು ಮಣ್ಣು ಸಂಗ್ರಹವಾಗಿದ್ದು, ಅದರಿಂದಲೇ ನೀರು ಹಿಂದಕ್ಕೆ ಹರಿಯುತ್ತದೆ. ಆದ್ದರಿಂದ ಈ ಕೆಸರು ಮಣ್ಣನ್ನೂ ತೆರವುಗೊಳಿಸಬೇಕಾಗಿದೆ. ಕೆಲವೆಡೆ 2-10 ಅಡಿಗಳಷ್ಟೂ ಹೂಳು ತುಂಬಿರುವ ಸಾಧ್ಯತೆಯಿದೆ. ಸಂಪೂರ್ಣವಾಗಿ ತೆರವುಗೊಳಿಸಿದರೆ ಮಾತ್ರ ನೆರೆಯಿಂದ ಮುಕ್ತಿ ಸಿಗಬಹುದು.

ಪೈಪ್, ಕೇಬಲ್ ಅಡ್ಡಿ: ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಪೈಪ್, ಕೇಬಲ್‌ಗಳು ಅಡ್ಡಿಯಾಗಿವೆ. ನೀರಿನೊಂದಿಗೆ ಹರಿದು ಬರುವ ಕಸ-ಕಡ್ಡಿಗಳು ಇದರಲ್ಲಿ ಸಿಲುಕಿ ನೀರು ಹರಿಯಲು ತಡೆಯಾಗುತ್ತದೆ. ಗುಡ್ಡ ಪ್ರದೇಶದಿಂದ ಬರುವ ಮಣ್ಣು-ಮರಳು ಈ ಸ್ಥಳದಲ್ಲಿ ಶೇಖರಣೆಗೊಳ್ಳುತ್ತದೆ. ಜೆಸಿಬಿಯಿಂದಲೂ ಇದನ್ನು ತೆರವುಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ರಾಜಕಾಲುವೆಯಲ್ಲಿ ನೀರು ಹರಿದು ಹೋಗಲು ಸಮಸ್ಯೆಯಾಗಿ ಸಂಗ್ರಹ ಹೆಚ್ಚಾಗಿ ನೆರೆಗೆ ಕಾರಣವಾಗುತ್ತದೆ. ನಗರದಲ್ಲಿ ಮುಖ್ಯವಾಗಿ ಬಿಜೈ, ಬಳ್ಳಾಲ್‌ಭಾಗ್, ಕೊಡಿಯಾಲ್‌ಬೈಲ್, ಕುದ್ರೋಳಿ, ಜಪ್ಪಿನಮೊಗರು, ಪಾಂಡೇಶ್ವರ, ಮಾಲೆಮಾರ್, ಕೊಟ್ಟಾರ ಚೌಕಿ, ಫೋರ್ತ್‌ಮೈಲ್, ಪಂಪ್‌ವೆಲ್ ಭಾಗದಲ್ಲಿ ರಾಜಕಾಲುವೆ ಹರಿಯುತ್ತದೆ. ಇದಕ್ಕೆ ಹೊಂದಿಕೊಂಡಂತಿರುವ ತಗ್ಗು ಪ್ರದೇಶಗಳಲ್ಲಿ ನೆರೆ ಬರುವುದು ಸಾಮಾನ್ಯವಾಗಿದೆ.

ರಾಜಕಾಲುವೆ ಹೂಳು ತೆರವು ಕುರಿತಂತೆ ಏಜೆನ್ಸಿಗಳನ್ನು ಫಿಕ್ಸ್ ಮಾಡಲಾಗಿದ್ದು, 10 ದಿನದಲ್ಲಿ ಹೂಳು ತೆರವು ಆರಂಭವಾಗಲಿದೆ. ರಾಜಕಾಲುವೆಗೆ ಆದ್ಯತೆ ನೀಡಿ ಹೂಳು ತೆಗೆಯಲಾಗುವುದು, ಜತೆಗೆ 1 ಮೀಟರ್ ಅಗಲದ ತೋಡುಗಳ ಹೂಳನ್ನೂ ತೆಗೆಯಲಾಗುವುದು. ಸುರತ್ಕಲ್ ಭಾಗದಲ್ಲಿರುವ ರಾಜಕಾಲುವೆಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹೆಚ್ಚು ನೆರೆಗೆ ಕಾರಣವಾಗುವ ರಾಜಕಾಲುವೆಗೆ ಮೊದಲ ಆದ್ಯತೆ ನೀಡಲಾಗುವುದು.

ಪ್ರೇಮಾನಂದ ಶೆಟ್ಟಿ, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net