

ಚಳ್ಳಕೆರೆ: ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ತುಂಬಿದೆ. ಶಾಲೆ ಸಮೀಪ ಹಾಗೂ ಇತರೆಡೆಗಳಲ್ಲಿನ ಚರಂಡಿಗಳಲ್ಲಿ ಕಸ ತುಂಬಿದ್ದು, ಗಬ್ಬು ನಾರುತ್ತಿವೆ.
ಅಲ್ಲಲ್ಲಿ ನೀರು ನಿಂತಿರುವ ಪರಿಣಾಮ ಸೊಳ್ಳೆ ಹಾವಳಿ ಹೆಚ್ಚಾಗಿದೆ. ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ.
ರೋಗ-ರುಜಿನ ಹರಡುವ ಭೀತಿಯಲ್ಲಿ ಗ್ರಾಮಸ್ಥರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡರು. ಗ್ರಾಮದಲ್ಲಿನ ಚರಂಡಿಗಳ ಸ್ವಚ್ಛತೆಗೆ ಸ್ಥಳೀಯ ಪಂಚಾಯಿತಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಚರಂಡಿ ವಾಸನೆ ಮತ್ತು ಸೊಳ್ಳೆಗಳ ಹಾವಳಿಗೆ ಗ್ರಾಮದಲ್ಲಿ ಅನೈರ್ಮಲ್ಯತೆ ತಾಂಡವವಾಡುತ್ತಿದೆ.
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮುದ್ದುಕುಮಾರ, ಬಸವರಾಜ, ನರಸಿಂಹ, ನಾಗರಾಜ, ಒಬಣ್ಣ, ನರಸಮ್ಮ ಆಗ್ರಹಿಸಿದ್ದಾರೆ.
ಪಂಚಾಯಿತಿಯ ಕಾರ್ಯಗಳಲ್ಲಿ ಗ್ರಾಮಗಳ ಸ್ವಚ್ಛತೆಗೆ ಮೊದಲ ಆದ್ಯತೆ ಇದೆ. ಕೂಡಲೇ ಗ್ರಾಪಂ ವತಿಯಿಂದ ಗ್ರಾಮದಲ್ಲಿನ ಚರಂಡಿಗಳ ಸ್ವಚ್ಛತೆಗೆ ಕ್ರಮ ವಹಿಸಲು ಸೂಚಿಸಲಾಗುವುದು.ಜಿ.ಕೆ.ಹೊನ್ನಯ್ಯ, ತಾಪಂ ಇಒ, ಚಳ್ಳಕೆರೆ