

ಉಪ್ಪಿನಂಗಡಿ: ಇಲ್ಲಿಗೆ ಸಮೀಪ ಓಡ್ಲ ಎಂಬಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಸ್ಥಳೀಯ ವ್ಯಕ್ತಿಯೋರ್ವರು ಅಕ್ರಮವಾಗಿ ಅಗೆದು ಹಾಕಿದ್ದು, ಅಗೆದು ತೆಗೆದ ಮಣ್ಣು ಚರಂಡಿ ಮೇಲೆ ಹಾಕಿದ ಕಾರಣ ಚರಂಡಿಯೂ ಬಂದ್ ಆಗಿ ಮಳೆಯ ನೀರು ರಸ್ತೆಯಲ್ಲೇ ಹರಿಯಿತು.
ಇದರಿಂದಾಗಿ ವಾಹನ ಚಾಲಕರು ಪರದಾಡುವಂತಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿವೆ. ಪೈಪ್‌ಲೈನ್ ಅಳವಡಿಸುವ ಸಲುವಾಗಿ ಭಾನುವಾರ ಮಧ್ಯಾಹ್ನ ರಸ್ತೆ ಅಗೆದಿದ್ದು, ನಿರಂತರ ಮಳೆ ಸುರಿಯುತ್ತಿದ್ದರಿಂದಾಗಿ ಭಾರಿ ಮಳೆಯ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆಯೇ ಹರಿದ ಪರಿಣಾಮ ರಸ್ತೆ ತೋಡಿನಂತಾಯಿತು. ರಸ್ತೆಯ ತುಸು ಮುಂದೆ ಅಪಾಯಕಾರಿ ತಿರುವು ಇದ್ದು, ರಸ್ತೆಯ ತುಂಬಾ ನೀರು ನಿಂತಿದ್ದ ಕಾರಣ ಅಪಾಯಕ್ಕೆ ಆಹ್ವಾನ ನೀಡಿದಂತಾಯಿತು. ವಾಹನ ಚಾಲಕರು ಮತ್ತು ಸಾರ್ವಜನಿಕರು ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಪಿಡಬ್ಲ್ಯುಡಿ ಇಂಜಿನಿಯರ್‌ಗೆ ಕರೆ ಮಾಡಿ ಅಹವಾಲು ಸಲ್ಲಿಸಿ, ರಸ್ತೆ ಅಗೆತ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ರಸ್ತೆ ಅಗೆಯುವುದಕ್ಕೆ ಯಾರಿಗೂ ಅನುಮತಿ ನೀಡಿಲ್ಲ. ರಸ್ತೆಯನ್ನು ಅಗೆದು ಸಮಸ್ಯೆ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಸ್ವತ್ತುಗಳಿಗೆ ಹಾನಿ ಉಂಟುವಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. - ಕಾನಿಷ್ಕ, ಪುತ್ತೂರು ಪಿಡಬ್ಲ್ಯುಡಿ ಜೂನಿಯರ್ ಇಂಜಿನಿಯರ್.