

ಸಿಂಧನೂರು: ತಾಲೂಕಿನ ಬನ್ನಿಗನೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಗ್ರಾಮಸ್ಥರು ದಿನಕ್ಕೊಂದು ಸಮಸ್ಯೆ ಎದುರಿಸುವಂತಾಗಿದೆ.
ಗ್ರಾಮದ ಸರ್ಕಾರಿ ಶಾಲೆಯಿಂದ ಗುಗ್ಗರಹಳ್ಳದವರೆಗೆ ಕೆಕೆಆರ್‌ಡಿಪಿ ಯೋಜನೆಯಡಿ 17 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದ ಮನೆಗಳ ಮುಂಭಾಗದಲ್ಲಿ ಚರಂಡಿ ಮೇಲಿನ ಡಬಾಸ್ (ಸಿಮೆಂಟ್ ಹೊದಿಕೆ) ಕೇವಲ ಮೂರು ಮೀಟರ್ ಹಾಕಲಾಗಿದ್ದು, ಇದರಿಂದಾಗಿ ವಾಹನ, ಎತ್ತಿನ ಬಂಡಿ ಹಾಗೂ ದನ, ಕರುಗಳು ಸಂಚರಿಸಲು ತೊಂದರೆಯಾಗಿದೆ.
ಚರಂಡಿ ಮೇಲಿನ ಡಬಾಸ್ ಕೇವಲ 3 ಮೀಟರ್ ಹಾಕಿರುವುದರಿಂದ ದನ, ಕರುಗಳಿಗೆ ತಿರುಗಾಡಲು ತೊಂದರೆಯಾಗಿದೆ. ಗುರುವಾರ ಬೆಳಗ್ಗೆ ಗ್ರಾಮದ ರಶೀದ್ ಎಂಬುವರ ಆಕಳು ಚರಂಡಿಯೊಳಗೆ ಬಿದ್ದು ಗಾಯಗೊಂಡಿದೆ. ಹಗ್ಗದ ಸಹಾಯದಿಂದ ಆಕಳನ್ನು ಮೇಲೆತ್ತಿ ಚಿಕಿತ್ಸೆ ನೀಡಲಾಗಿದೆ.
ನಿಧಾನಗತಿ ಹಾಗೂ ಅವೈಜ್ಞಾನಿಕ ಕಾಮಗಾರಿ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದು, ಈ ಕುರಿತು ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಗುಗ್ಗರಹಳ್ಳ ಪಕ್ಕದಲ್ಲಿ ಊರಿನೊಳಗೆ ಪ್ರವೇಶ ಪಡೆಯುವ ದಾರಿ ಹಾಗೂ ಚರಂಡಿಗೆ ಸರಿಯಾಗಿ ಸಂಪರ್ಕ ಕಲ್ಪಿಸದ ಕಾರಣದಿಂದಾಗಿ ಗ್ರಾಮಸ್ಥರು ಸುತ್ತುವರಿದು ತಮ್ಮ ಮನೆಗೆ ತೆರಳಬೇಕಾಗಿದೆ.
ಗ್ರಾಮದ ರಸ್ತೆ ಕೂಡ ಹದಗೆಟ್ಟಿದ್ದು, ಸಂಚಾರಕ್ಕೆ ಆಯೋಗ್ಯವಾಗಿದೆ. ರಸ್ತೆಯಲ್ಲಿ ಎಲ್ಲೆಂದರೆಲ್ಲಿ ಹೊಂಡ-ಗುಂಡಿಗಳು ಸೃಷ್ಟಿಯಾಗಿದ್ದು ವಾಹನ ಸವಾರರು ಜೀವಭಯದಿಂದ ಸಂಚರಿಸುತ್ತಿದ್ದಾರೆ. ಈ ಮಧ್ಯೆ ಚರಂಡಿ ನಿರ್ಮಾಣಕ್ಕಾಗಿ ಮಣ್ಣು ಅಗೆದು ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದು, ಇದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಒಂದು ಕಡೆ ರಸ್ತೆಯೂ ಹದಗೆಟ್ಟಿದ್ದು, ಇನ್ನೊಂದೆಡೆ ಚರಂಡಿ ಕಾಮಗಾರಿ ವಿಳಂಬದಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ.
ನಿಧಾನಗತಿ ಚರಂಡಿ ಕಾಮಗಾರಿಯಿಂದಾಗಿ ಗ್ರಾಮಸ್ಥರು ದಿನಕ್ಕೊಂದು ಸಮಸ್ಯೆ ಎದುರಿಸುವಂತಾಗಿದೆ. ಡಬಾಸ್ ಸರಿಯಾಗಿ ಹಾಕದ ಕಾರಣ ನಮ್ಮ ಆಕಳು ಚರಂಡಿಗೆ ಬಿದ್ದು ಗಾಯಗೊಂಡಿದೆ. ಸಂಚಾರಕ್ಕೂ ತೊಂದರೆಯಾಗಿದೆ. ಚರಂಡಿ ಕಾಮಗಾರಿ ಸಮರ್ಪಕವಾಗಿಲ್ಲ. ಈ ಬಗ್ಗೆ ತುರ್ತು ಕ್ರಮಕೈಗೊಂಡು ಸಮಸ್ಯೆ ಸರಿಪಡಿಸಬೇಕು.ರಶೀದ್, ತಾಲೂಕು ಅಧ್ಯಕ್ಷ, ದಲಿತ ವಿದ್ಯಾರ್ಥಿ ಪರಿಷತ್
ಬನ್ನಿಗನೂರು ಗ್ರಾಮದ ಸರ್ಕಾರಿ ಶಾಲೆಯಿಂದ ಗುಗ್ಗರಹಳ್ಳದವರೆಗೆ ಕೆಕೆಆರ್‌ಡಿಪಿ ಯೋಜನೆಯಡಿ 17 ಲಕ್ಷ ರೂ. ವೆಚ್ಚದ ಕಾಮಗಾರಿ ಒಂದೂವರೆ ವರ್ಷ ವಿಳಂಬವಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ಸಾಕಷ್ಟು ಬಾರಿ ಹೇಳಿ, ಕಾಮಗಾರಿ ಗುಣಮಟ್ಟದಲ್ಲಿ ಮಾಡುವಂತೆ ಸೂಚಿಸಲಾಗಿದೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ, ಕ್ರಮಕ್ಕೆ ಮುಂದಾಗುತ್ತೇವೆ.ಶಿವಪ್ಪ, ಎಇ, ಲೋಕೋಪಯೋಗಿ ಇಲಾಖೆ, ಸಿಂಧನೂರು