

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ ಉತ್ತಮ ಮಳೆಯಾಗುತ್ತಿರುವುದರಿಂದ ನಗರದ ಚರಂಡಿ, ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ರಸ್ತೆ ಮಧ್ಯೆ ಹಾದುಹೋಗಿರುವ ಬಹುತೇಕ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದ ದುರ್ನಾತ ಹೊಮ್ಮುತ್ತಿದ್ದು, ಜನರು ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುಜಿಡಿ ನಿರ್ಮಾಣ ಯೋಜನೆಯಡಿ ನಗರದಲ್ಲಿ ಒಳ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಆ ಸಂದರ್ಭದಲ್ಲಿ ನಗರದ ಎಲ್ಲ ರಸ್ತೆಗಳನ್ನು ಅಗೆದು ಪೈಪ್‌ಲೈನ್ ಅಳವಡಿಸಲಾಗಿತ್ತು. ಈಗ ಪೈಪ್‌ಲೈನ್‌ಗಳಲ್ಲಿ ಹೂಳು ತುಂಬಿಕೊಂಡಿದೆ. ಅಲ್ಲದೆ, ಮ್ಯಾನ್‌ಹೋಲ್‌ಗಳು ಕಿತ್ತುಹೋಗಿವೆ. ಕೆಲ ಮ್ಯಾನ್‌ಹೋಲ್‌ಗಳು ಬಾಯ್ದೆರೆದುಕೊಂಡಿವೆ.
ತಾಲೂಕು ವೈದ್ಯಾಧಿಕಾರಿ ಕಚೇರಿ ಬಳಿಯೇ ಮ್ಯಾನ್‌ಹೋಲ್ ಕಿತ್ತುಹೋಗಿ ವಾರಗಳೇ ಕಳೆದಿವೆ. ಈವರೆಗೂ ನಗರಸಭೆ ಅಧಿಕಾರಿಗಳು ಅದನ್ನು ದುರಸ್ತಿ ಮಾಡಲು ಮುಂದಾಗಿಲ್ಲ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಓಡಾಡುವುದೇ ದುಸ್ತರವಾಗಿದೆ. ಆ ಗುಂಡಿಗಳಲ್ಲಿ ಚರಂಡಿ ನೀರು ನಿಂತಿದ್ದು, ವಾಹನ ಸಂಚರಿಸಿದಾಗ ಸಿಡಿದು ಜನರು ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ. ದಿವಾಕರ್, ಸ್ಥಳೀಯ ನಗರಸಭೆ ಅಧಿಕಾರಿಗಳು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ವಿಫಲರಾಗಿದ್ದಾರೆ. ನಗರದ ಬಹುತೇಕ ಕಡೆ ಮ್ಯಾನ್‌ಹೋಲ್ ಕಿತ್ತುಹೋಗಿದ್ದು ಬಲಿಗಾಗಿ ಬಾಯ್ದೆರೆದಿವೆ. ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಶಾಸಕರು, ನಗರಸಭೆ ಅಧಿಕಾರಿಗಳು ಗಾಢನಿದ್ದೆಯಲ್ಲಿ ಇರುವುದರಿಂದ ಜನರ ಸಮಸ್ಯೆ ಅವರಿಗೆ ಕಾಣುತ್ತಿಲ್ಲ. ಎಂ.ಜಿ. ಶ್ರೀನಿವಾಸ್, ನಗರಸಭಾ ಮಾಜಿ ಸದಸ್ಯ ಮ್ಯಾನ್‌ಹೋಲ್ ದುರಸ್ತಿ ವಾಹನ ಕೆಟ್ಟುಹೋಗಿದ್ದ ಕಾರಣ, ಸರಿಪಡಿಸಲಾಗಿಲ್ಲ. ಕೆಲಕಡೆ ಅವನ್ನು ಮುಚ್ಚಲು ಸಾಧ್ಯವಾಗಿಲ್ಲ. ವಾಹನ ದುರಸ್ತಿಯಾದ ಕೂಡಲೇ ಮ್ಯಾನ್‌ಹೋಲ್ ದುರಸ್ತಿ ಮಾಡಿಸಿ, ಮುಚ್ಚಳ ಅಳವಡಿಸಲಾಗುವುದು. ರಮೇಶ್ ಸುಣಗಾರ್, ಪೌರಾಯುಕ್ತ