

ಮದ್ದೂರು: ತಾಲೂಕಿನ ಸಾವಿರಾರು ಎಕರೆ ಪ್ರದೇಶಗಳಿಗೆ ನೀರು ಹರಿಯುವ ಕೆಆರ್‌ಎಸ್ ಕೊನೇ ಭಾಗದ ನಾಲೆಗಳಿಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ, ಶಾಸಕ ದಿನೇಶ್ ಗೂಳಿಗೌಡ ಗುರುವಾರ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ರೈತರಿಂದ ಅಹವಾಲು ಸ್ವೀಕರಿಸಿದರು.
ಕೆಆರ್‌ಎಸ್ ಕೊನೇ ಭಾಗದ ನಾಲೆಗಳಾದ ಕೊಪ್ಪ, ಕೌಡ್ಲೆ, ಕಿರಂಗೂರು, ಅಬಲವಾಡಿ, ಹೊಸಗಾವಿ ಸೇರಿದಂತೆ ಹಲವು ಭಾಗಗಳಿಗೆ ಭೇಟಿ ನೀಡಿ ನಾಲೆಗಳ ಸ್ಥಿತಿಗತಿ ಪರಿಶೀಲಿಸಿದರು. ನಾಲೆಗಳ ಆಧುನೀಕರಣ, ನಾಲೆಯ ಕೊನೆಯ ಹಂತದವರೆಗೆ ನೀರು ಹರಿಸುವ ಸಂಬಂಧ ರೈತರೊಂದಿಗೆ ಚರ್ಚಿಸಿದರು.
ಈ ವೇಳೆ ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷ ಬಿತ್ತನೆ ಪ್ರಮಾಣ ಹೆಚ್ಚಳವಾಗಿದೆ. ಈ ವರ್ಷ ಜಿಲ್ಲೆಯಲ್ಲಿ 1,92,103 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 1,96,478 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ವಿಸ್ತೀರ್ಣ 12,817 ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ ಎಂದರು.
ಕೊನೇ ಭಾಗದ ನಾಲೆಗಳಿಗೆ 285 ಕ್ಯೂಸೆಕ್ ನೀರು ಬರುತ್ತಿದೆ. ಕಾವೇರಿ ಜಲಾನಯನ ಪ್ರದೇಶ ಹಾಗೂ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಕೊರತೆಯಿಂದ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಮಾಹಿತಿ ನೀಡಿದರು.
ಕೃಷಿ ಚಟುವಟಿಕೆಗಾಗಿ ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಸೆಪ್ಟೆಂಬರ್ ಅಂತ್ಯಕ್ಕೆ 38 ಸಾವಿರ ರೈತರಿಗೆ 338 ಕೋಟಿ ರೂ.ಗಳನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ. ನಮ್ಮ ಸರ್ಕಾರ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಹಾಗೂ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲವನ್ನು ರೈತರ ಅಗತ್ಯಕ್ಕೆ ತಕ್ಕಂತೆ ಕಲ್ಪಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಕೆರೆಗಳಿಗೆ ಕಾಯಕಲ್ಪ: ಮೊದಲು ಕೆರೆ ತುಂಬಿ ನದಿಗೆ ನೀರು ಹರಿಯುತ್ತಿತ್ತು. ಆದರೀಗ ನದಿಯಿಂದ ಕೆರೆಗೆ ನೀರು ಹರಿಸುವಂತಾಗಿದೆ. ಇದನ್ನು ಸರಿಪಡಿಸಲು ಕೆರೆಗಳ ಕಾಯಕಲ್ಪ ಅತ್ಯವಶ್ಯಕ ಎಂದರು.
ಜಿಲ್ಲೆಯಲ್ಲಿ 962 ಕೆರೆಗಳಿವೆ. ಇವುಗಳಲ್ಲಿ ಕಾವೇರಿ ಜಲಾನಯನ ಭಾಗದ 174 ಕೆರೆಗಳ ಕಾಯಕಲ್ಪ ಮಾಡಬೇಕಿದೆ. ಕೆರೆಗಳ ಒತ್ತುವರಿ ತೆರವು, ಮಣ್ಣು ತೆಗೆಯದಂತೆ ನೋಡಿಕೊಳ್ಳಬೇಕಿದೆ. ಈ ಎಲ್ಲ ಅಂಶಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಗಮನಕ್ಕೆ ತಂದು ಈ ಭಾಗದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಲವೆಡೆ ಭೇಟಿ: ತಾಲೂಕಿನ 16ಕ್ಕೂ ಹೆಚ್ಚು ಗ್ರಾಮಗಳಿಗೆ ದಿನೇಶ್ ಗೂಳಿಗೌಡ ಭೇಟಿ ಪರಿಶೀಲಿಸಿದರು. ಕೆ.ಜಿ. ಕೊಪ್ಪಲು, ಸೋಮನಹಳ್ಳಿ, ಕೆ.ಎಚ್. ಕೊಪ್ಪಲು, ಕಿರಂಗೂರು ಕಳ್ಳಿಕೊಪ್ಪಲು, ತರೀಕೆರೆ, ಮಾರಂಗೆರೆ, ಚಿಕ್ಕ ಹೊಸಗಾವಿ, ಕೌಡ್ಲೆ, ಅಬಲವಾಡಿ, ಹೊಸಗಾವಿ ಬೆಕ್ಕಳಲೆ, ಗಟ್ಟಳ್ಳಿ, ಹಳೆಹಳ್ಳಿ ಭಾಗದ ನಾಲೆಗಳನ್ನು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿದರು.
ನಾಲೆಗಳ ಪಕ್ಕದಲ್ಲಿ ಬೆಳೆದಿರುವ ಗಿಡಗಂಟಿ ತೆರವು ಮಾಡಿ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ನಾಲೆ ಪಕ್ಕದ ರಸ್ತೆಗಳ ದುರಸ್ತಿ ಮಾಡಬೇಕು. ನಾಲೆಗಳ ಕೆಲಭಾಗಗಳಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಸೇತುವೆ ನಿರ್ಮಾಣ ಮಾಡುವುದರ ಜತೆಗೆ 18 ತೂಬುಗಳನ್ನು ಹೊಸದಾಗಿ ನಿರ್ಮಿಸಲಾಗುವುದು. ಕೆರೆ ನಾಲೆಗಳ ದುರಸ್ತಿ ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ ಎಂದು ರೈತರಿಗೆ ದಿನೇಶ್ ಗೂಳಿಗೌಡ ಹೇಳಿದರು.
ಸಕಾಲದಲ್ಲಿ ರಸಗೊಬ್ಬರ ಪೂರೈಕೆ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಸಲು ಅಧಿಕಾರಿಗಳಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ. ಈಗಾಗಲೇ 83,317 ಮೆ.ಟನ್ ರಸಗೊಬ್ಬರವನ್ನು ರೈತರಿಗೆ ಸರಬರಾಜು ಮಾಡಿದ್ದು, 26,726 ಮೆ.ಟನ್ ರಸಗೊಬ್ಬರ ಉಗ್ರಾಣಗಳಲ್ಲಿ ದಾಸ್ತಾನಿದೆ. ರಸಗೊಬ್ಬರ ಮತ್ತು ಕೀಟನಾಶಕ ಕೊರತೆಯಾಗದಂತೆ ರೈತರಿಗೆ ಸಕಾಲದಲ್ಲಿ ಸರಬರಾಜು ಮಾಡಲು ಸೂಚಿಸಲಾಗಿದೆ ಎಂದರು.
ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ಇಂಜಿನಿಯರ್ ರಘುರಾಮ್, ಎಕ್ಸಿಕ್ಯೂಟಿವ್ ಇಂಜಿನಿಯರ್ ನಂಜುಂಡೇಗೌಡ, ಕೊಪ್ಪ ವಿಭಾಗದ ಎಇಇ ದೀಪಕ್ ರಾಘವೇಂದ್ರ, ಕೆರಗೋಡು ವಿಭಾಗದ ಎಇಇ ಅಜಯ್, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ತಾಪಂ ಮಾಜಿ ಉಪಾಧ್ಯಕ್ಷ ಬೆಕ್ಕಳಲೆ ರಘು, ಗ್ರಾಪಂ ಸದಸ್ಯ ಕುಮಾರ್ ಕೊಪ್ಪ ಇತರರು ಇದ್ದರು.