ಬಸಿಗಾಲುವೆ ಮೂಲಕ ನೀರು ಹೊರಹಾಕಿ

19-BYD-3
Published on

ಬ್ಯಾಡಗಿ: ತಾಲೂಕಿನಾದ್ಯಂತ ಜೂನ್​ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾದ ವರದಿಯಾಗಿದ್ದು, ರೈತರು ಸಸಿಗಳ ಮಧ್ಯೆ ನಿಂತಿರುವ ಮಳೆ ನೀರನ್ನು ಬಸಿಗಾಲುವೆ ಮೂಲಕ ಹೊರಹಾಕಿ ಬೆಳೆ ಕಾಪಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗಣೇಶ ಕಮ್ಮಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜೂನ್ ಮೊದಲ 15 ದಿನಗಳಲ್ಲಿ ಸರಾಸರಿ 38 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು, ಈಗ 75 ಮಿ.ಮೀ.ಮಳೆಯಾಗಿದೆ. ಮೆಕ್ಕೆಜೋಳ, ಶೇಂಗಾ, ಸೋಯಾಬೀನ್, ಹತ್ತಿ ಬಿತ್ತನೆ ಶೇ. 90ರಷ್ಟು ಪೂರ್ಣಗೊಂಡಿದೆ. ಈ ಎಲ್ಲ ಬೆಳೆಗಳು ಸಸಿಗಳು ಎಳೆಯದಾಗಿದ್ದು, ನೀರಿನ ತೇವಾಂಶ ಹೆಚ್ಚಾದಲ್ಲಿ ಬೆಳೆ ಹಾನಿಯಾಗುವ ಅಥವಾ ಸಸಿಗಳ ಬೆಳೆ ಕುಂಠಿತವಾಗುವ ಸಾಧ್ಯತೆಯಿದೆ. ರೈತರು ಹೊಲಗಳಲ್ಲಿ ಸಣ್ಣದಾಗಿ ಬಸಿಗಾಲುವೆ ನಿರ್ವಿುಸಿಕೊಂಡು ನಿಂತ ನೀರು ಹೊರಗೆ ಕಳುಹಿಸಬೇಕು. ಕಳೆ ಕಸ ಕಿತ್ತ ಬಳಿಕ ಬೆಳೆಗೆ ಅಗತ್ಯಕ್ಕೆ ತಕ್ಕಷ್ಟು ಯೂರಿಯಾ ರಸಗೊಬ್ಬರ ಮಿತವಾಗಿ ಬಳಸಬೇಕು ಎಂದು ತಿಳಿಸಿದ್ದಾರೆ.

ನ್ಯಾನೋ ದ್ರವ ಯೂರಿಯಾ ಬಳಸಲು ಸಲಹೆ: ಬೆಳೆಗಳ ಉತ್ತೇಜನಕ್ಕೆ ಹಾಗೂ ಫಸಲಿಗೆ ನೆರವಾಗಲು ಶಿಫಾರಸಿನಂತೆ ರಸಗೊಬ್ಬರ ಬಳಕೆ ಮಾಡಬೇಕಿದೆ. ಗೊಬ್ಬರ ಬಳಕೆಯಿಂದ ಸಸಿಗಳ ಶಾರೀರಿಕ ಬೆಳವಣಿಗೆ, ಕಾಳು ಕಟ್ಟುವಿಕೆಗೆ ಸಹಕಾರಿಯಾಗಲಿದ್ದು, ಹುಲಸಾದ ಬೆಳೆಯಿಂದ ರೋಗಬಾಧೆ ನಿಯಂತ್ರಣವಾಗಲಿದೆ. ಹರಳು ಯೂರಿಯಾ ಗೊಬ್ಬರ ಬಳಕೆ ಕೆಲವೊಮ್ಮೆ ಸಮರ್ಪಕವಾಗಿ ಬೆಳೆಗಳಿಗೆ ತಲುಪುವ ಸಾಧ್ಯತೆ ಕಡಿಮೆಯಿದ್ದು, ದ್ರವರೂಪದ ಯೂರಿಯಾ ಬಳಸಲು ಶಿಫಾರಸು ಮಾಡಲಾಗಿದೆ.</p><p>ರಸಗೊಬ್ಬರಕ್ಕೆ ಪರ್ಯಾಯವಾಗಿ 25 ರಿಂದ 30 ದಿನಗಳ ಬೆಳೆಗೆ ನ್ಯಾನೋ ಯೂರಿಯಾ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 4 ಮಿ.ಲೀ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬಹುದು. ಉತ್ತಮ ಫಲಿತಾಂಶಕ್ಕಾಗಿ 20 ರಿಂದ 25 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು. ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕಗಾತ್ರದ ಕಣಗಳನ್ನು ಹೊಂದಿದ್ದು, ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಶೇ. 80ರಷ್ಟು ಗೊಬ್ಬರ ಉಪಯೋಗಿಸಲ್ಪಡುತ್ತದೆ. ನೀರಿನಲ್ಲಿ ಕರಗುವ 19:19:19 ಹಾಗೂ ಪೋಟ್ಯಾಷ್ ಪ್ರತಿ ಲೀಟರ್ ನೀರಿಗೆ 1.5 ಗ್ರಾಂ ಬೆರೆಸಿ ಬೆಳೆಗಳ ಎಲೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಬೆಳೆಗಳು ಚೇತರಿಸಿಕೊಳ್ಳುತ್ತವೆ. ಶಿಫಾರಸು ಮಾಡಿದ ಕಳೆನಾಶಕ ಮಾತ್ರ ಬಳಸಬೇಕು. ರಾಸಾಯನಿಕ ಬಳಕೆ ಮಾಡಿದಲ್ಲಿ ಬೆಳೆ ಹಾನಿ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net