

ದೇವರಹಿಪ್ಪರಗಿ: ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ, ಅಂಕಲಗಿ ಕೆರೆಗಳಿಗೆ ಚಿಮ್ಮಲಗಿ ಏತ ನೀರಾವರಿ ಕಾಲುವೆ ಮೂಲಕ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ಎತ್ತು, ಚಕ್ಕಡಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಶುಕ್ರವಾರ ತಹಸೀಲ್ದಾರ್ ಹಾಗೂ ಕೆಬಿಜೆಎನ್‌ಎಲ್ ಇಂಜನಿಯರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ಮೊಹರೆ ಹಣಮಂತರಾಯ ವೃತ್ತದಿಂದ ಮೆರವಣಿಗೆ ಹೊರಟು ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿದರು.
ತಾಲೂಕು ರೈತಸಂಘದ ಅಧ್ಯಕ್ಷ ಅಜೀಜ್ ಯಲಗಾರ, ಶಂಕರಗೌಡ ಪಾಟೀಲ (ಯರನಾಳ), ಬಸವರಾಜ ಕಲ್ಲೂರ, ಸಂಗನಗೌಡ ಬಿರಾದಾರ (ಮುಳಸಾವಳಗಿ) ಮಾತನಾಡಿ, ತಾಲೂಕಿನ ಕೆಲವು ಭಾಗದಲ್ಲಿ ಮಳೆ ಇಲ್ಲದ ಕಾರಣ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಈ ಕುರಿತು ಆಲಮಟ್ಟಿ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಹಲವು ಬಾರಿ ದೂರವಾಣಿ ಮೂಲಕ ನೀರು ಹರಿಸಲು ವಿನಂತಿಸಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಆರೋಪಿಸಿದರು.
ಕೆರೆಗಳನ್ನು ತುಂಬಲು ಕ್ರಮ ಕೈಗೊಳ್ಳುವ ಕುರಿತು ಖಚಿತ ಮಾಹಿತಿ ನೀಡದಿದ್ದರೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಬರುವವರೆಗೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿ ಪ್ರತಿಭಟನೆಗೆ ಕುಳಿತರು.
ಬೆಳಗ್ಗೆ 11.30 ಗಂಟೆಗೆ ಆರಂಭವಾದ ಪ್ರತಿಭಟನೆ ಸ್ಥಳದಲ್ಲಿ ತಹಸೀಲ್ದಾರ್ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಂಜೆ ಕೆಬಿಜೆಎನ್‌ಎಲ್ ಇಂಜಿನಿಯರ್‌ಗಳು ಆಗಮಿಸಿ ನೀರಿನ ವಾಸ್ತವ ಸ್ಥಿತಿ ಕುರಿತು ಹೇಳಿ ಮನವಿ ಮಾಡಿದಾಗ ಪ್ರತಿಭಟನೆ ಹಿಂತೆಗೆದುಕೊಂಡು ಮನವಿ ಸಲ್ಲಿಸಿದರು.
ಇಇ ಶಶಿಕಾಂತ ಶೀವನಾಳ, ವಿಶ್ವನಾಥ ಚವ್ಹಾಣ, ಎಇಇ ಶಿವಲಾಲ್ ಚವ್ಹಾಣ, ಶಿವಾಜಿ ಬಿರಾದಾರ, ರೈತರಾದ ಸಾಹೇಬಗೌಡ ರೆಡ್ಡಿ, ಶಿವಶಂಕರ ರೂಗಿ, ಪ್ರಭು ಸೂಳಿಭಾವಿ, ಶರಣಯ್ಯ ಹಿರೇಮಠ, ಮಲ್ಲಿಕಾರ್ಜುನಗೌಡ ಬಿರಾದಾರ, ನಿಂಗನಗೌಡ ಹುಲಸಗುಂದ, ಮಲ್ಲನಗೌಡ ಬಿರಾದಾರ, ಗುತ್ತೇಪ್ಪ ಕೊಟ್ನಾಳ, ಸುರೇಶ ಪೂಜಾರಿ, ಮಹಾಂತೇಶ ಪೂಜಾರಿ, ಮಹಾದೇವ ತಡಲಗಿ, ಶ್ರೀಶೈಲ ಕಬಾಡಗಿ, ರವಿ ಚೌಧರಿ, ವಿದ್ಯಾಧರ ಸಂಗೋಗಿ, ಮಾದೇವಪ್ಪ ನಾಟೀಕಾರ, ಸಂತೋಷ ಬಿರಾದಾರ, ಬಿ.ಸಿ.ಮಂಗಳೂರ, ಎಸ್.ಆರ್.ಬಿರಾದಾರ ಇತರರಿದ್ದರು.