ತುಂಗಭದ್ರ ಜಲಾಶಯದ ಕಾಲುವೆಗಳಿಗೆ ನೀರು ಹರಿಸಿ: ಕಾರ್ತಿಕ್ ಜೆ. ಆಗ್ರಹ

WhatsApp Image 2023-07-27 at 12.04.28 PM
Published on

ಹೊಸಪೇಟೆ: ತುಂಗಭದ್ರ ನೀರಾವರಿ ಸಲಹಾ ಸಮಿತಿ ರಚನೆಗಾಗಿ ಕಾಯದೇ ಈ ಭಾಗದ ರೈತರ ಅನುಕೂಲಕ್ಕಾಗಿ ಭಾನುವಾರದ ಒಳಗಾಗಿ ಎಲ್ಲ ನೀರಾವರಿ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ರೈತ ಮುಖಂಡ ಕಾರ್ತಿಕ್ ಜೆ. ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ವಿಸರ್ಜನೆಯಾಗಿದ್ದರಿಂದ ಸರ್ಕಾರದಿಂದ ನೇಮಕಗೊಂಡಿದ್ದ ತುಂಗಭದ್ರ ನೀರಾವರಿ ಸಲಹಾ ಸಮಿತಿಯೂ ರದ್ದುಗೊಂಡಿದೆ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾಗಿದ್ದರೂ, ಇನ್ನೂ ನೀರಾವರಿ ಸಲಹಾ ಸಮಿತಿ ಮತ್ತು ಕಾಡಾ ಅಧ್ಯಕ್ಷರನ್ನು ನೇಮಿಸಿಲ್ಲ. ಹೀಗಾಗಿ ೨೦೧೩ ಮತ್ತು ೨೦೧೯ರ ಮಾದರಿಯಲ್ಲಿ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಎಲ್‌ಎಲ್ ಸಿ ಅಡಿ ಕರ್ನಾಟಕದ ೯೨ ಸಾವಿರ ಎಕರೆ, ಆಂಧ್ರ ಪ್ರದೇಶದ ೧.೫೭ ಲಕ್ಷ, ಎಚ್‌ಎಲ್‌ಸಿ ಅಡಿ ೧.೯೦ ಲಕ್ಷ ಎಕರೆ ಕರ್ನಾಟಕ ಮತ್ತು ಆಂಧ್ರ ೧.೯೨ ಲಕ್ಷ, ಎಡದಂಡೆ ಮುಖ್ಯ ಕಾಲುವೆ ೬.೦೨ ಲಕ್ಷ ಎಕರೆ, ೧೬ ವಿಜಯನಗರ ಕಾಲುವೆಗಳಿಂದ ಈ ಭಾಗದ ೨೬ ಸಾವಿರ ಎಕರೆ, ಸೇರಿದಂತೆ ಒಟ್ಟಾರೆ ೧೬.೩೮ ಲಕ್ಷ ಎಕರೆ ಪ್ರದೇಶದ ರೈತರು ಕಾಲುವೆಗಳನ್ನೇ ನೆಚ್ಚಿಕೊಂಡಿದ್ದಾರೆ. ಈಗಾಗಲೇ ಭತ್ತ, ಕಬ್ಬು, ಬಾಳೆ ಮತ್ತತರೆ ಬೆಳೆಗಳನ್ನು ನಾಟಿ ಮಾಡಿರುವ ರೈತರು ನೀರಿನ ಅಭಾವ ಎದುರಿಸುತ್ತಿದ್ದಾರೆ. ಸಕಾಲಕ್ಕೆ ಬೆಳೆಗಳಿಗೆ ನೀರು ಹರಿಸದಿದ್ದರೆ ಭಾಗಶಃ ಇಳುವರಿ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಮುಖಂಡ ಹೇಮರೆಡ್ಡಿ ಧರ್ಮಸಾಗರ ಮಾತನಾಡಿ, ಮಳೆ ಇಲ್ಲದಿದ್ದಾಗ ನೀರಾವರಿ ಪರಿಹಾರ ಕೋರಲಾಗಿದೆ. ಕಳೆದ ೧೦-೧೫ ದಿನಗಳಿಂದ ಸುರಿಯುತ್ತಿರುವ ಮಳೆಗೆ ಮೆಕ್ಕೆ ಜೋಳ, ಹತ್ತಿ, ಮೆಣಸಿನಕಾಯಿ ಬೆಳೆಗಳಿಗೆ ವಿವಿಧ ರೋಗಭಾದೆ ಕಾಡುತ್ತಿದ್ದು, ಸರ್ಕಾರದಿಂದ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಮತ್ತೋರ್ವ ರೈತ ಮುಖಂಡ ಮಲ್ಲಿಕಾರ್ಜನ ಮಾತನಾಡಿ, ರೈತ ಸಂಪರ್ಕ ಕೇಂದ್ರ, ರಸ ಗೊಬ್ಬರ ಅಂಗಡಿಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳ ದರ ಪಟ್ಟಿ ಪ್ರದರ್ಶಿಸುತ್ತಿಲ್ಲ. ಅವರು ಹೇಳಿದ್ದೇ ಬೆಲೆಯಾಗಿದ್ದು, ಹಗಲು ಧರೋಡೆ ನಡೆಸಿದ್ದಾರೆ. ದರ ಪಟ್ಟಿ ಪ್ರದರ್ಶಿಸುವಂತೆ ಹಿಂದಿನ ಜಿಲ್ಲಾಧಿಕಾರಿ ಟಿ.ವೆಂಕಟೇಶ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರ್ತಕರಿಗೆ ಸೂಚಿಸಿದರೂ, ಪ್ರಯೋಜನವಾಗಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜೆ.ಮಲ್ಲಪ್ಪ. ಆರ್.ಆರ್.ತಾಯಪ್ಪ. ಮುತ್ತಯ್ಯ, ಯಮನೂರಪ್ಪ ಉಪಸ್ಥಿತರಿದ್ದರು.

ಕೇಂದ್ರದ ನೀತಿ ಬದಲಾಗಲಿಈ ಹಿಂದೆ ಶೇ.೨೦ ರಷ್ಟು ಮಳೆ ಅಭಾವ ಎದುರಾದರೂ ಬರಗಾಲವೆಂದು ಘೊಷಿಸಿ, ರೈತರಿಗೆ ಪರಿಹಾರ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರ ಬರಗಾದ ಮಾಗಸೂಚಿಯನ್ನೇ ಬದಲಾಯಿಸಿದೆ. ಶೇ.೬೦ ರಷ್ಟು ಮಳೆ ಅಭಾವ ಎದುರಾದರೆ ಮಾತ್ರ ಬರಗಾಲವೆಂದು ಘೋಷಿಸುವಂತಾಗಿದ್ದು, ರೈತರಿಗೆ ಅನ್ಯಾಯವಾಗುತ್ತದೆ. ಕೇಂದ್ರ ನೀತಿ ಬದಲಾಗಬೇಕು. -ಕಾರ್ತಿಕ್ ಜೆ. ರೈತರ ಮುಖಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net