

ಕನಕಗಿರಿ: ಒಣ ಬೇಸಾಯ ಪ್ರದೇಶವಾದ ತಾಲೂಕಿನ ಜಾಲಿಹುಡಾ ಗ್ರಾಮದ ರೈತ, ಮಾಜಿ ಸೈನಿಕ ಕನಕಪ್ಪ ಮಮ್ಮಳಿ ಅವರು ನರೇಗಾ ಯೋಜನೆ ಸಹಾಯಧನದಡಿ ಡ್ರ್ಯಾಗನ್ ಫ್ರೂಟ್ ಬೆಳೆದು ಕೃಷಿಯಲ್ಲಿ ಲಾಭ ಕಂಡುಕೊಂಡಿದ್ದಾರೆ.
ರೈತ ಈ ಮೊದಲು ಜಮೀನಿನಲ್ಲಿ ಒಣ ಬೇಸಾಯ ನೆಚ್ಚಿಕೊಂಡಿದ್ದರು. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಲಾಭ ಸಿಗಲಿಲ್ಲ. ಎಂಟು ವರ್ಷಗಳ ಕಾಲ ಬಿಎಸ್‌ಎಫ್‌ನಲ್ಲಿ ಸೇವೆಗೈದು ನಿವೃತ್ತಿ ಹೊಂದಿದ ನಂತರ ಸೇನೆಯಿಂದ ವಾಪಸ್ಸಾಗಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ವೈಯಕ್ತಿಕ ಕೆಲಸದ ನಿಮಿತ್ತ ರಾಯಚೂರಿಗೆ ತೆರಳಿದಾಗ ಆ ಜಿಲ್ಲೆಯ ರೈತರೊಬ್ಬರು ಡ್ರಾೃಗನ್ ಪ್ರೂಟ್ ಬೆಳೆದಿದ್ದನ್ನು ನೋಡಿದ್ದಾರೆ. ಬಳಿಕ ಅವರ ಬಳಿ ತೆರಳಿ ಬೆಳೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ತೋಟಗಾರಿಕೆ ಇಲಾಖೆಯನ್ನು ಸಂರ್ಪಕಿಸಿ, ನರೇಗಾ ಯೋಜನೆಯಡಿ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಯಶ ಕಂಡಿದ್ದಾರೆ.
ಐದು ಎಕರೆ ಜಮೀನು ಇದೆ. ಈ ಪೈಕಿ ಒಂದು ಎಕರೆ ಪ್ರದೇಶದಲ್ಲಿ 6-8 ಅಡಿ ಅಂತರದಲ್ಲಿ ಕಲ್ಲುಕಂಬ ನಿರ್ಮಿಸಿ 1400 ಡ್ರಾಗನ್ ಸಸಿಗಳನ್ನು ನಾಟಿ ಮಾಡಲಾಗಿದೆ. ಒಂದೂವರೆ ವರ್ಷಕ್ಕೆ ಹಣ್ಣು ಬಿಡುವ ಡ್ರ್ಯಾಗನ್ ಸಸಿಗಳು ಈಗಾಗಲೇ ದೊಡ್ಡದಾಗಿ ಬೆಳೆದಿವೆ. ಕಳೆದ ಮೂರ್ನಾಲ್ಕು ತಿಂಗಳಿಂದ ಹಣ್ಣು ಬಿಡಲು ಪ್ರಾರಂಭಿಸಿವೆ. ಅಲ್ಲದೇ, ತಿಂಗಳಿಗೆ 20 ಕೆಜಿಗೂ ಅಧಿಕ ಹಣ್ಣುಗಳು ಸಿಗುತ್ತಿದ್ದು, ಕೆಜಿಗೆ 120 ರಿಂದ 150 ರೂ.ವರೆಗೆ ಮಾರಾಟವಾಗುತ್ತಿವೆ. ಈಗಾಗಲೇ ಉತ್ತಮ ಆದಾಯ ಬರುತ್ತಿದೆ. ಜೂನ್ ವೇಳೆಗೆ ತೋಟದಲ್ಲಿ ಮತ್ತಷ್ಟು ಹಣ್ಣಿನ ಇಳುವರಿ ಬರಲಿದ್ದು, ಲಾಭದ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಕನಕಪ್ಪ.
ರೈತರು ಒಂದೇ ಬೆಳೆಗೆ ಅಂಟಿಕೊಳ್ಳಬಾರದು. ವಿವಿಧ ಬೆಳೆಗಳನ್ನು ಬೆಳೆಯಲು ವಿಫುಲ ಅವಕಾಶಗಳಿವೆ. ಈ ಮೂಲಕ ಉತ್ತಮ ಆದಾಯ ಗಳಿಸಬಹುದಾಗಿದೆ. ಅಲ್ಲದೇ, ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ನೀಡಲಾಗುತ್ತಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು.ಚಂದ್ರಶೇಖರ್ ಬಿ. ಕಂದಕೂರ್ ಇಒ ತಾಪಂ ಕನಕಗಿರಿ ತೋಟ ಮಾಡಲು 2.5 ಲಕ್ಷ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ ಸಾಮಗ್ರಿ ವೆಚ್ಚ, ಕೂಲಿ ವೆಚ್ಚ ಸೇರಿ 60 ಸಾವಿರ ರೂ. ನರೇಗಾದಿಂದ ದೊರೆತಿದೆ. ಇದರಿಂದ ಡ್ರಾೃಗಲ್ ಫ್ರೂಟ್ ಬೆಳೆಯಲು ಅನುಕೂಲವಾಗಿದೆ. ಕನಕಪ್ಪ ಮಮ್ಮಳಿ, ರೈತ ಒಂದು ರೈತ ಕುಟುಂಬಕ್ಕೆ 5 ಲಕ್ಷ ರೂ.ವರೆಗೂ ನರೇಗಾದಡಿ ಸಹಾಯಧನ ಪಡೆಯುವ ಅವಕಾಶವಿದೆ. ಅದರಂತೆ ಮಾಜಿ ಸೈನಿಕರೂ ಆಗಿರುವ ರೈತ ಕನಕಪ್ಪ ಬೆಳೆದಿರುವ ಡ್ರ್ಯಾಗನ್ ಫ್ರೂಟ್‌ಗೆ ಅನುಗುಣವಾಗಿ ಸಹಾಯಧನ ನೀಡಲಾಗಿದೆ. ಗಂಗಾವತಿ ತಾಲೂಕಿನಾದ್ಯಂತ 750 ಎಕರೆಯಲ್ಲಿ ನಾನಾ ಬೆಳೆಗಳಿಗೆ ಸಹಾಯಧನ ನೀಡಲಾಗಿದೆ.ಮಹೇಶ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ