ಕಮಾಯಿ ಹೆಚ್ಚಿಸಿದ ಡ್ರ್ಯಾಗನ್​ ಫ್ರೂಟ್​

Published on

ರೈತ ನಾಗೇಶ್ ಕೈ ಹಿಡಿದ ಬೆಳೆ ಕೆಂಪುರಾಣಿ | ಪ್ರತಿ ಕೊಯ್ಲಿಗೆ ₹5 ಲಕ್ಷ ಆದಾಯ

ಜಿ.ನಾಗರಾಜ್ ಬೂದಿಕೋಟೆ
ಟೊಮ್ಯಾಟೊ, ಆಲೂಗಡ್ಡೆ ಸೇರಿ ಇತರ ವಾಣಿಜ್ಯ ಬೆ ಬೆಳೆದು ಹೆಸರಾಗಿದ್ದ ಕೋಲಾರ ಜಿಲ್ಲೆ ರೈತ ಈಗ ಡ್ರ್ಯಾಗನ್​ ಫ್ರೂಟ್ ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗುತ್ತಿದ್ದಾರೆ.
ವಿವಿಧ ದೇಶಗಳಿಗೆ ಟೊಮ್ಯಾಟೊ ಹಾಗೂ ಇನ್ನಿತರ ತರಕಾರಿ ಪೂರೈಸಿದ್ದ ಜಿಲ್ಲೆಯಲ್ಲೀಗ ಕೆಂಪುರಾಣಿಯೆಂದೇ ಗುರುತಿಸಿಕೊಂಡಿರುವ ಆರೋಗ್ಯಕ್ಕೆ ರಾಮ ಬಾಣವಾದ ಡ್ರ್ಯಾಗನ್​ ಫ್ರೂಟ್ ಬೆಳೆಯುವ ಮೂಲಕ ಇಲ್ಲಿನ ರೈತ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ಬಾರಿಯೂ ಒಂದೇ ತೆರನಾದ ಬೆಳೆ ಬೆಳೆದು ಹಲವರು ಕೈ ಸುಟ್ಟುಕೊಂಡ ಅನೇಕ ನಿದರ್ಶನಗಳಿವೆ. ಅಂತೆಯೇ, ತರಕಾರಿ ಬೆಳೆ ಬೆಳೆದು ನಷ್ಟ ಅನುಭವಿಸಿದ್ದ ತಾಲೂಕಿನ ನತ್ತಿಬೆಲೆ ಗ್ರಾಮದ ರೈತ ನಾಗೇಶ್ ಡ್ರ್ಯಾಗನ್​ ಫ್ರೂಟ್ ಬೆಳೆಯುವ ಮೂಲಕ ಆರ್ಥಿಕ ಪ್ರಗತಿ ಕಂಡಿದ್ದಾರೆ.
10ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿರುವ ರೈತ ನಾಗೇಶ್, ಸಾಮಾಜಿಕ ಜಾಲತಾಣದಲ್ಲಿ ಡ್ರ್ಯಾಗನ್​ ಫ್ರೂಟ್ ಬೆಳೆಯ ಬಗ್ಗೆ ಮಾಹಿತಿ ಪಡೆದು, ನಂತರ ಬೆಂಗಳೂರಿನ ಯಲಹಂಕದಿಂದ ಪಿಂಕ್ ತಳಿಯ ಡ್ರ್ಯಾಗನ್​ ಫ್ರೂಟ್ ಸಸಿಗಳನ್ನು ತಂದು 3 ಎಕರೆಯಲ್ಲಿ ನಾಟಿ ಮಾಡಿ ಪೋಷಣೆ ಮಾಡಿದ್ದಾರೆ. ಆರಂಭದಲ್ಲಿ ಬೆಳೆಗೆ ಸುಮಾರು 15 ಲಕ್ಷ ಬಂಡವಾಳ ಹಾಕಿದ್ದ ರೈತ ಇಂದು ಒಂದು ಕೊಯ್ಲಿಗೆ ಸುಮಾರು ₹5 ಲಕ್ಷದವರೆಗೂ ಆದಾಯ ಪಡೆಯುತ್ತಿದ್ದಾರೆ. ಬೆಳೆಯಲ್ಲಿ ಒಮ್ಮೆ ಇಳುವರಿ ಕಂಡರೆ 6 ತಿಂಗಳ ಕಾಲ ತಿಂಗಳಿಗೆ 4 ಬಾರಿ ಕೊಯ್ಲು ಬರುತ್ತದೆ. ಒಂದು ಎಕರೆಗೆ 1 ಟನ್‌ನಷ್ಟು ಇಳುವರಿ ಬರುತ್ತಿದ್ದು, ಪ್ರತಿ ಕೆಜಿ 150 ರೂ.ನಂತೆ ಬೆಂಗಳೂರು ಸೇರಿ ಇತರ ನಗರ ಪ್ರದೇಶಗಳಿಗೆ ನೇರವಾಗಿ ತೋಟದಿಂದಲೇ ವಾರಕ್ಕೊಮ್ಮೆ ಮಾರಾಟ ಮಾಡುವ ಮೂಲಕ ನಾಗೇಶ್ ಕೈತುಂಬ ಹಣ ಸಂಪಾದಿಸುತ್ತಿದ್ದಾರೆ.

ಕಡಿಮೆ ನಿರ್ವಹಣೆ
ಡ್ರ್ಯಾಗನ್​ ಫ್ರೂಟ್ ಬೆಳೆಗೆ ನೀರು ಪೂರೈಕೆ ಸೇರಿ ತೋಟದ ನಿರ್ವಹಣೆ ಕಡಿಮೆ ಆಗಿರುವುದರಿಂದ ಯಾರು ಬೇಕಾದರೂ ಬೆಳೆ ಬೆಳೆಯಬಹುದಾಗಿದೆ. ನಾಟಿ ಮಾಡಿದ ನಂತರ 6 ತಿಂಗಳಿಗೊಮ್ಮೆ ತಿಪ್ಪೆ ಗೊಬ್ಬರ ಮತ್ತು ಅಲ್ಪ ಪ್ರಮಾಣದಲ್ಲಿ ಡಿಎಪಿ ನೀಡಬೇಕಾಗುತ್ತದೆ. ಇತ್ತ ಗಿಡಕ್ಕೆ ರೋಗಬಾಧೆ ಅಥವಾ ಯಾವುದೇ ಹುಳಗಳು ಗಿಡವನ್ನು ನಾಶಪಡಿಸಬಾರದು ಎಂಬ ಕಾರಣಕ್ಕೆ ಬುಡಕ್ಕೆ ಹೊಂಗೆ ಹಿಂಡಿಯನ್ನು ಹಾಕಿ ಪೋಷಣೆ ಮಾಡಲಾಗುತ್ತದೆ. ಬೆಳೆ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆ ಮೂಲಕವೂ ನೆರವು ಲಭ್ಯವಿದ್ದು, ಅದರ ಸದ್ಬಳಕೆ ಮಾಡಿಕೊಂಡು ಡ್ರ್ಯಾಗನ್​ ಫ್ರೂಟ್ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.


ಟೊಮ್ಯಾಟೊ, ಎಲೆಕೋಸು, ಆಲೂಗಡ್ಡೆಯಂತಹ ಹಲವು ಬೆಳೆಗಳನ್ನು ಬೆಳೆದು ಬೆಲೆ ಇಲ್ಲದೆ ನಷ್ಟಕ್ಕೆ ಒಳಗಾಗಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಡ್ರಾೃಗನ್ ಹಣ್ಣಿನ ಬೆಳೆಯ ಬಗ್ಗೆ ಮಾಹಿತಿ ಪಡೆದು 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದೇನೆ. ಕಳೆದ 2 ವರ್ಷಗಳಿಂದ ಉತ್ತಮ ಇಳುವರಿ ಬರುತ್ತಿದ್ದು, ಹಾಕಿದ ಬಂಡವಾಳದ ಜತೆಗೆ ದುಪ್ಪಟ್ಟು ಆದಾಯ ಪಡೆಯುತ್ತಿದ್ದೇನೆ. ಆರಂಭದಲ್ಲಿ ಹೆಚ್ಚು ಬಂಡವಾಳ ಹಾಕಬೇಕು ನಂತರ 6 ತಿಂಗಳಿಗೊಮ್ಮೆ ಗೊಬ್ಬರ ಹಾಕಿ, ಪೋಷಣೆ ಮಾಡಿದರೆ ಉತ್ತಮ ಬೆಳೆ ಪಡೆಯಬಹದು. ನಾಗೇಶ್, ರೈತ


ಡ್ರ್ಯಾಗನ್​ ಫ್ರೂಟ್ ಬೆಳೆಗೆ ಕೀಟ ಬಾಧೆ ಮತ್ತು ನಿರ್ವಹಣೆ ವೆಚ್ಚ ಕಡಿಮೆ ಇದ್ದು, ಸಣ್ಣ ರೈತರೂ ಸಹ ತೋಟಗಾರಿಕೆ ಇಲಾಖೆಯಿಂದ ತಾಂತ್ರಿಕ ಮಾಹಿತಿ ಪಡೆದು ಬೆಳೆಯಲು ಮುಂದಾಗಬೇಕು. ಈಗಾಗಲೇ ಜಿಲ್ಲೆಯಲ್ಲಿ ಹತ್ತಾರು ರೈತರು ಡ್ರ್ಯಾಗನ್​ ಹಣ್ಣಿನ ಬೆಳೆ ಬೆಳೆದು ಆರ್ಥಿಕವಾಗಿ ಮುಂದೆ ಬಂದಿದ್ದಾರೆ. ಬೆಳೆಗೆ ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯ ಮೂಲಕ ಸಹಾಯಧನ ಸಹ ನೀಡಲಾಗುತ್ತದೆ.
ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net