ವಾರ್ಡ್ ಮರುವಿಂಗಡಣೆ ಕರಡು ಸಲ್ಲಿಕೆ: ಕೆಲ ವಾರ್ಡ್​ಗಳು ಕಣ್ಮರೆ ಸಾಧ್ಯತೆ, ವಾರ್ಡ್​ವಾರು ಸರಾಸರಿ ಜನಸಂಖ್ಯೆ 42,650

ಅಅಅಅ
Published on

ಬೆಂಗಳೂರು: ಬಿಬಿಎಂಪಿ ಸದಸ್ಯರ ಆಡಳಿತಾವಧಿ ಸೆಪ್ಟೆಂಬರ್​ಗೆ ಪೂರ್ಣಗೊಳ್ಳಲಿದ್ದು, ಮುಂದಿನ ಚುನಾವಣೆ ನಿಮಿತ್ತ ವಾರ್ಡ್​ಗಳನ್ನು ಮರುವಿಂಗಡಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಭಾಗದಲ್ಲಿ ವಾರ್ಡ್​ಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಗಳಿವೆ.

ಪ್ರತಿ ಚುನಾವಣೆಗೂ ವಾರ್ಡ್​ಗಳ ಮರುವಿಂಗಡಣೆ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶವಿದ್ದರೂ, ಕಳೆದ ಎರಡು ಚುನಾವಣೆಗಳಲ್ಲಿ ವಾರ್ಡ್ ಮರು ವಿಂಗಡಣೆ ಮಾಡಿರಲಿಲ್ಲ. ಆದರೆ, ಸೆಪ್ಟೆಂಬರ್​ಗೆ ಬಿಬಿಎಂಪಿಗೆ ಚುನಾಯಿತರಾದವರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕಿದೆ. ಹಾಗಾಗಿ ವಾರ್ಡ್ ಮರುವಿಂಗಡಣೆಗೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಂಗಡಣೆ ಕರಡು ಸಿದ್ಧಪಡಿಸಲಾಗಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಮಾ.4ಕ್ಕೆ ವಿಚಾರಣೆ: ರಾಜ್ಯ ಚುನಾವಣಾ ಆಯೋಗವು ವಾರ್ಡ್​ಗಳ ಮರುವಿಂಗಡಣೆ ಕುರಿತು ಸೂಕ್ತ ಮಾಹಿತಿ ಕಲೆಹಾಕುವಂತೆ ಹೈಕೋರ್ಟ್​ನಲ್ಲಿ ಅರ್ಜಿ ಹಾಕಿದೆ. ಹಾಗಾಗಿ ಮರುವಿಂಗಡಣೆಗೆ ಸಂಬಂಧಿಸಿದಂತೆ ಯಾವ ವರ್ಷದ ಆಧಾರ, ನೋಟಿಫಿಕೇಶನ್ ಹೊರಡಿಸುವ ದಿನಾಂಕ ಮತ್ತು ಮೀಸಲಾತಿ ಕುರಿತು ಸ್ಪಷ್ಟೀಕರಣ ಕೇಳಿದೆ. ಮಾ.4 ರಂದು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದ್ದು, ಆಗ ಮಾಹಿತಿ ನೀಡಲಾಗುತ್ತದೆ ಎಂದು ಆಯುಕ್ತ ಅನಿಲ್​ಕುಮಾರ್ ತಿಳಿಸಿದ್ದಾರೆ.

ಆಕ್ಷೇಪಣೆಗೆ ಕಾಲಾವಕಾಶ: ಬೆಂಗಳೂರು ನಗರ ಜಿಲ್ಲಾಧಿಕಾರಿ ಕರಡು ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಶೀಘ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಲಿದ್ದು, ಅದಕ್ಕೆ ಯಾವುದೇ ಆಕ್ಷೇಪಣೆಗಳಿದ್ದರೂ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆಕ್ಷೇಪಣಾ ಅರ್ಜಿಗಳ ವಿಚಾರಣೆ ಪೂರ್ಣಗೊಂಡ ನಂತರವೇ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

2007ರ ನಂತರ ಬಿಬಿಎಂಪಿ: ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿದ್ದಾಗ 100 ವಾರ್ಡ್ ಗಳಿದ್ದವು. 2007ರಲ್ಲಿ 7 ನಗರಸಭೆ, ಒಂದು ಪಟ್ಟಣ ಪಂಚಾಯಿತಿ ಹಾಗೂ 110 ಹಳ್ಳಿಗಳನ್ನು ಪಾಲಿಕೆಗೆ ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಚಿಸಿ 198 ವಾರ್ಡ್​ಗಳನ್ನು ರಚಿಸಲಾಯಿತು. ಈಗ 198 ವಾರ್ಡ್​ಗಳ ವ್ಯಾಪ್ತಿಯನ್ನು ಮರುವಿಂಗಡಣೆ ಮಾಡಲಾಗುತ್ತಿದೆ. ಆದರೆ, ಹೆಚ್ಚುವರಿ ವಾರ್ಡ್​ಗಳನ್ನು ರಚಿಸಲಾಗುವುದಿಲ್ಲ.

ಕೇಂದ್ರಭಾಗದ ವಾರ್ಡ್​ಗಳ ಕಡಿತ: 2011ರ ಜನಗಣತಿ ಪ್ರಕಾರ 198 ವಾರ್ಡ್ ಗಳಲ್ಲಿ ಒಟ್ಟು 84.43 ಲಕ್ಷ ಜನಸಂಖ್ಯೆಯಿದೆ. ಅದೇ ಮಾದರಿಯಲ್ಲಿ ಸರಾಸರಿ 42,650 ಜನರನ್ನು ಒಳಗೊಂಡಂತೆ ವಾರ್ಡ್​ಗಳ ಮರುವಿಂಗಡಣೆ ಮಾಡಲಾಗುತ್ತಿದೆ. ಕೇಂದ್ರ ಭಾಗದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ವಾರ್ಡ್​ಗಳ ಸಂಖ್ಯೆ ಕಡಿತವಾಗಲಿದೆ. ಹೊರವಲಯದಲ್ಲಿ ಕೆಲವು ವಾರ್ಡ್​ಗಳು ಹೆಚ್ಚಾಗಬಹುದು. ಈಗ ಕರಡು ಸಿದ್ಧವಾಗಿದ್ದು, ಅಂತಿಮ ಆದೇಶದಿಂದ ಎಲ್ಲವೂ ಸಿದ್ಧವಾಗಲಿದೆ ಎಂದು ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net