ಕರಡು ಮತದಾರರ ಪಟ್ಟಿ ಪ್ರಕಟ; ಜಿಲ್ಲೆಯ ೫೪೨ ಮತಗಟ್ಟೆಗಳಲ್ಲಿ ವಿಶೇಷ ಅಭಿಯಾನ

9adarshkdga5
Published on


ಮಡಿಕೇರಿ: ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಕೈಗೊಳ್ಳಲಾಗಿದ್ದು, ಈ ಸಂಬಂಧ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಬುಧವಾರ ಪ್ರಕಟಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರ ಜತೆ ನಡೆದ ಸಭೆಯ ಸಂದರ್ಭದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.


ಭಾರತ ಚುನಾವಣಾ ಆಯೋಗ ಪ್ರತೀ ವರ್ಷದಂತೆ ೧೮ ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡಲು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯ ಕೈಗೊಂಡಿದೆ. ಈ ಸಂಬಂಧ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಆ ಹಿನ್ನೆಲೆಯಲ್ಲಿ ಡಿ೮ ರವರೆಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಹರಿಗೆ ಅವಕಾಶ ಮಾಡಿದೆ. ಆ ನಿಟ್ಟಿನಲ್ಲಿ ಜನವರಿ, ಏಪ್ರಿಲ್, ಜುಲೈ ಮತ್ತು ಅ೧ ರಂದು ೧೮ ವರ್ಷ ಪೂರ್ಣಗೊಳ್ಳುವ ಯುವ ಜನರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ, ಏಪ್ರಿಲ್, ಜುಲೈ ಮತ್ತು ಅ೦೧, ೨೦೨೩ ಕ್ಕೆ ೧೮ ವರ್ಷ ಪೂರ್ಣಗೊಳ್ಳುವ ಯುವಕ ಮತ್ತು ಯುವತಿಯರು ಹಾಗೂ ೧೮ ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ಇದ್ದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-೬ ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಡಾ.ಬಿ.ಸಿ.ಸತೀಶ ಹೇಳಿದರು.


ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರು ಮೃತ ಪಟ್ಟಿದ್ದಲ್ಲಿ, ಸ್ಥಳಾಂತರ ಗೊಂಡಿದ್ದಲ್ಲಿ ಅಥವಾ ಪುನರಾವರ್ತನೆ ಆಗಿದ್ದಲ್ಲಿ ನಮೂನೆ ೭ ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆ ನಿಟ್ಟಿನಲ್ಲಿ ವಿವಿಧ ಪಕ್ಷಗಳ ಪ್ರಮುಖರು ತಮ್ಮ ತಮ್ಮ ವಾರ್ಡ್ ಮತ್ತು ಗ್ರಾಮಗಳಲ್ಲಿ ಈ ಬಗ್ಗೆ ಗಮನಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಕೋರಿದರು.


ನ೯ ರಿಂದ ಡಿ೮ ರವರೆಗೆ ಆಯಾಯ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ತಾಲೂಕು ಕಚೇರಿಗಳಿಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಮತದಾರರೇ https://www.nvsp.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮತ್ತು https://www.nvsp.in, voterportal.eci.gov.in ಮತ್ತು ವಿಎಚ್‌ಎ ಮೊಬೈಲ್ ಆ್ಯಪ್ ಮೂಲಕ ನಮೂನೆ ೬ಎ, ನಮೂನೆ ೭ ಮತ್ತು ನಮೂನೆ ೮ ನ್ನು ಸಲ್ಲಿಸಬಹುದಾಗಿದೆ ಎಂದರು.


ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಂಬಂಧ ನ೧೨, ೨೦, ಡಿ೩ ಮತ್ತು ೪ ರಂದು ಜಿಲ್ಲೆಯ ೫೪೨ ಮತಗಟ್ಟೆಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ೧೮ ವರ್ಷ ಮೇಲ್ಪಟ್ಟವರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ ಜಿಲ್ಲಾಧಿಕಾರಿ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ನೋಂದಣಿಯಾಗದೆ ಇದ್ದಲ್ಲಿ ನಮೂನೆ ೬ ರಲ್ಲಿ ಅರ್ಜಿಯನ್ನು ಸ್ಥಳದಲ್ಲಿಯೇ ನೀಡಬಹುದಾಗಿದೆ. ಅಂತಿಮ ಮತದಾರರ ಪಟ್ಟಿ ಜ೫ ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


ತೆನ್ನಿರಾ ಮೈನಾ(ಕಾಂಗ್ರೆಸ್), ಅಪ್ಪಣ್ಣ(ಬಿಜೆಪಿ) ಇತರರು ಪಾಲ್ಗೊಂಡಿದ್ದರು.

೪,೩೯,೦೩೯ ಮತದಾರರು
ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೪,೩೯,೦೩೯ ಮತದಾರರಿದ್ದು, ೨,೧೭,೩೪೯ ಪುರುಷ ಮತ್ತು ೨,೨೧,೬೭೧ ಮಹಿಳಾ ಮತದಾರರು, ೧೯ ಇತರೆ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೨೩,೪೧೨ ಮತದಾರರು ಇದ್ದು, ೧,೦೯,೯೫೨ ಪುರುಷ ಮತ್ತು ೧,೧೩,೪೫೨ ಮಹಿಳಾ, ೮ ಇತರೆ ಮತದಾರರು ಇದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨,೧೫,೬೨೭ ಮತದಾರರು ಇದ್ದು, ೧,೦೭,೩೯೭ ಪುರುಷ ಮತ್ತು ೧,೦೮,೨೧೯ ಮಹಿಳಾ, ೧೧ ಇತರೆ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಹೆಸರು ನೋಂದಣಿಗೆ ಕೈಜೋಡಿಸಿ
ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕಾರ್ಯದಲ್ಲಿ ಕೊಡಗು ಜಿಲ್ಲೆಯಲ್ಲಿ ಶೇ.೭೫.೪೩ ರಷ್ಟು ಪ್ರಗತಿ ಸಾಧಿಸಿದೆ. ಕಳೆದ ಒಂದು ವರ್ಷದಲ್ಲಿ ೧೮ ವರ್ಷ ಪೂರ್ಣಗೊಂಡ ಯುವ ಮತದಾರರು ಜಿಲ್ಲೆಯ ೪೭ ಮತಗಟ್ಟೆಗಳಲ್ಲಿ ಒಬ್ಬರೂ ಸಹ ತಮ್ಮ ಹೆಸರು ನೋಂದಣಿ ಮಾಡದಿರುವ ಬಗ್ಗೆ ಮಾಹಿತಿ ಇದೆ. ಆ ನಿಟ್ಟಿನಲ್ಲಿ ವಿವಿಧ ಪಕ್ಷಗಳ ಪ್ರಮುಖರು ಯುವ ಮತದಾರರ ಹೆಸರು ನೋಂದಣಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಕಾಲ್ನಡಿಗೆ ಜಾಥ
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಸ್ಥಳಾಂತರ, ಹೆಸರು ತೆಗೆಯುವುದು ಮತ್ತಿತರ ಸಂಬಂಧ ನ೧೨, ೨೦, ಡಿ೩ ಮತ್ತು ೪ ರಂದು ಜಿಲ್ಲೆಯಲ್ಲಿ ಇರುವ ೫೪೨ ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಅಭಿಯಾನ ನಡೆಯಲಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವತಿಯಿಂದ ಕಾಲ್ನಡಿಗೆ ಜಾಥ ಬುಧವಾರ ನಡೆಯಿತು. ನಗರದ ಗಾಂಧಿ ಮಂಟಪದಿಂದ ಮಂಗೇರಿರ ಮುತ್ತಣ್ಣ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮಾರ್ಗ ಕಾಲ್ನಡಿಗೆ ಜಾಥ ನಡೆಯಿತು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಕಾಲೇಜು ವಿದ್ಯಾರ್ಥಿಗಳು ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net