

ವಿಜಯಪುರ: ಕರಡು ಮತದಾರ ಪಟ್ಟಿಯಿಂದ ಅರ್ಹ ಯುವ ಮತದಾರರು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕಿ, ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿ ಸುಷಮಾ ಗೋಡಬೋಲೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾನುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಅರ್ಹ ಯುವ ಮತದಾರರು, ವಿಶೇಷಚೇತನ ಮತದಾರರು, ಮಹಿಳೆಯರ ಹೆಸರು ಸೇರ್ಪಡೆಗೆ ಸ್ವೀಪ್ ಚಟುವಟಿಕೆ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ವಿವಿಧ ಕಾಲೇಜುಗಳಲ್ಲಿ ಅಭಿಯಾನ ನಡೆಸಿ ಯುವ ಮತದಾರರ ಹೆಸರು ಸೇರ್ಪಡೆಗೆ ಪ್ರೇರೇಪಿಸಬೇಕು. ಮನೆ-ಮನೆ ಸಮೀಕ್ಷೆ ನಡೆಸಿ ನಿಖರವಾದ ಮಾಹಿತಿ ದಾಖಲಿಸಬೇಕು. ಅಲ್ಲದೆ, ಒಬ್ಬ ಮತದಾರರ ಹೆಸರು ಎರಡೂ ಕಡೆ ಇರದಂತೆ ನೋಡಿಕೊಂಡು ಶುದ್ಧವಾದ ಅಂತಿಮ ಮತದಾರರ ಪಟ್ಟಿ ತಯಾರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಜಿಲ್ಲೆಯಲ್ಲಿ ಮತದಾರರ ಪರಿಷ್ಕರಣೆಗೆ ಹಮ್ಮಿಕೊಂಡ ವಿಶೇಷ ಅಭಿಯಾನ ಕುರಿತು ಮಾಹಿತಿ ನೀಡಿದರು.
ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿ.ಪಂ. ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಚುನಾವಣಾ ತಹಸೀಲ್ದಾರ್ ಪ್ರೇಮಸಿಂಗ ಪವಾರ, ವಿವಿಧ ತಾಲೂಕಾ ತಹಸೀಲ್ದಾರರು, ಹಾಜಿಲಾಲ ದಳವಾಯಿ, ಭೋಗೇಶ ಸೋಲಾಪುರ, ಕೆ.ಆರ್. ತೊರವಿ, ರಾಜು ಹಿರೇಮಠ ಮತ್ತಿತರರಿದ್ದರು.
2025ರ ಜ.1ರವರೆಗೆ ಒಳಗೊಂಡ ಅರ್ಹ ಕರಡು ಮತದಾರ ಪಟ್ಟಿಯನ್ನು ಅ.29ರಂದು ಪ್ರಕಟಿಸಲಾಗಿದ್ದು, ನ.28ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿ.24ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುವುದು. 2025ರ ಜ.1ರಂದು ಆರೋಗ್ಯ ನಿಯತಾಂಕಗಳನ್ನು ಪರಿಶೀಲಿಸುವುದು ಮತ್ತು ಅಂತಿಮ ಪಟ್ಟಿ ಪ್ರಕಟಣೆಗೆ ಆಯೋಗದ ಅನುಮತಿ ಪಡೆಯುವುದು ಮತ್ತು 2025ರ ಜ.6ರಂದು ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು ಎಂದು ಸುಷಮಾ ಗೋಡಬೋಲೆ ಮಾಹಿತಿ ನೀಡಿದರು.