

ಬೆಂಗಳೂರು: ನಾಗರಿಕರ ಸ್ವತ್ತುಗಳಿಗೆ ಡಿಜಿಟಲ್ ದಾಖಲೆ ನೀಡುವ ಕರಡು ಇ - ಖಾತಾ ಸೌಲಭ್ಯವನ್ನು ಆಸ್ತಿದಾರರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಈ ಸೌಲಭ್ಯವನ್ನು ಬಿಬಿಎಂಪಿ ಸಿಬ್ಬಂದಿ ಹಾಗೂ ಸ್ವಯಂಸೇವಕರ ಮೂಲಕ ಮಂಗಳವಾರದಿಂದ (ಜು.1) ವಿತರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
ಬ್ಯಾಟರಾಯನಪುರ ಕ್ಷೇತ್ರದ ಸಹಕಾರನಗರ ಆಟದ ಮೈದಾನದಲ್ಲಿ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಆಯೋಜಿಸಿದ್ದ ‘ಮನೆ ಬಾಗಿಲಿಗೆ ಇ-ಖಾತಾ’ ಯೋಜನೆ ಅಡಿಯಲ್ಲಿ ಲಾನುಭವಿಗಳಿಗೆ ಸಾಂಕೇತಿವಾಗಿ ಡಿಜಿಟಲ್ ದಾಖಲೆ ವಿತರಿಸಿ ಭಾನುವಾರ ಮಾತನಾಡಿದರು.
ಸಾರ್ವಜನಿಕರ ಆಸ್ತಿಗಳಿಗೆ ರಕ್ಷಣೆ ಹಾಗೂ ದಾಖಲೆಗಳ ಸುರಕ್ಷತೆಯ ಗ್ಯಾರಂಟಿಗಾಗಿ ರಾಜ್ಯ ಸರ್ಕಾರ ಇ- ಖಾತಾ ವಿತರಿಸುವ ಯೋಜನೆ ಕೈಗೆತ್ತಿಕೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 25 ಲಕ್ಷ ಆಸ್ತಿದಾರರಿಗೆ ಈ ಸೌಲಭ್ಯ ಸಿಗಲಿದ್ದು, ಈಗಾಗಲೇ 5.51 ಲಕ್ಷ ಆಸ್ತಿದಾರರಿಗೆ ಅಂತಿಮ ಇ- ಖಾತಾ ವಿತರಿಸಲಾಗಿದೆ. ಉಳಿದವರಿಗೂ ಅವರ ಮನೆಗಳಿಗೆ ಕರಡು ಇ- ಖಾತಾವನ್ನು 100 ದಿನಗಳಲ್ಲಿ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ 4 ಸಾವಿರ ಚದರ ಅಡಿ ವಿಸ್ತೀರ್ಣದ ಸೈಟ್‌ನಲ್ಲಿ ಮನೆ ನಿರ್ಮಿಸುವವರಿಗೆ ಆನ್‌ಲೈನ್ ಮೂಲಕ ‘ನಂಬಿಕೆ ನಕ್ಷೆ’ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
3 ವರ್ಷದಲ್ಲಿ ಲಕ್ಷ ಕೋಟಿ ವೆಚ್ಚದ ಯೋಜನೆ ಜಾರಿ:
ನಗರದಲ್ಲಿ ಸಂಚಾರ ಸಿಕ್ಕು ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರ ಉಪಕ್ರಮ ಕೈಗೊಂಡಿದೆ. ಇದಕ್ಕಾಗಿ ಮುಂದಿನ 3 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಮೊತ್ತದ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಪಿಆರ್‌ಆರ್, ಎಲಿವೇಟೆಡ್ ರಸ್ತೆ ಸೇರಿ ಇನ್ನಿತರ ಪ್ರಾಜೆಕ್ಟ್‌ಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇ- ಖಾತಾ ಸೌಲಭ್ಯವನ್ನು ಜನರಿಗೆ ತಲುಪಿಸುವಲ್ಲಿ ನೆರವಾದ ಬಿಬಿಎಂಪಿ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ಡಿಸಿಎಂ ಅವರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್, ವಲಯ ಆಯುಕ್ತ ಕರಿಗೌಡ, ಕಾಂಗ್ರೆಸ್ ಮುಖಂಡರಾದ ಹನುಮಂತೇಗೌಡ, ಆನಂದ್, ಶ್ರೀನಿವಾಸಯ್ಯ ಮತ್ತಿತರರು ಹಾಜರಿದ್ದರು.
ಮಧ್ಯವರ್ತಿಗಳ ಹಾವಳಿಗೆ ಬಲಿಯಾಗಬೇಡಿ:
ಸಾರ್ವಜನಿಕರು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ನಕಲಿ ದಾಖಲೆ ಬಳಸಿ ಲಪಟಾಯಿಸಿರುವ ಹಲವು ಪ್ರಕರಣಗಳು ಇವೆ. ಒಂದೇ ಆಸ್ತಿಯನ್ನು ಇಬ್ಬರ ಹೆಸರಿನಲ್ಲಿ ಖಾತಾ ಮಾಡಿಕೊಡಲಾಗಿದೆ. ಇದಕ್ಕೆ ಕಡಿವಾಣ ಹಾಕಲು ಡಿಜಿಟಲ್ ಖಾತಾ ಮೂಲಕ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸಲಾಗುತ್ತಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಶಿಬಿರ ನಡೆಸಿ 51 ಸಾವಿರ ಆಸ್ತಿದಾರರಿಗೆ ಉಚಿತ ಸೌಲಭ್ಯ ಒದಗಿಸಿದ್ದೇವೆ. ಇನ್ನೂ 1 ಲಕ್ಷ ಆಸ್ತಿದಾರರಿಗೆ ಸೌಲಭ್ಯ ನೀಡಲು ಗುರಿ ಹೊಂದಲಾಗಿದೆ. ಸುಲಭವಾಗಿ ಸಿಗುವ ಇ-ಖಾತಾವನ್ನು ಸ್ವಯಂ ಮುಂದಾಗಿ ಪಡೆದುಕೊಳ್ಳಬೇಕೆ ಹೊರತು ಮಧ್ಯವರ್ತಿಗಳ ಬಣ್ಣದ ಮಾತುಗಳಿಗೆ ಬಲಿಯಾಗಬಾರದು ಎಂದು ಸಚಿವ ಕೃಷ್ಣಬೇರೇಗೌಡ ಮನವಿ ಮಾಡಿದರು.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ದಾಖಲೆ ಸಂಖ್ಯೆ 51 ಸಾವಿರ ಇ- ಖಾತಾ ವಿತರಿಸಲಾಗಿದೆ. ಇದೇ ರೀತಿ ಇತರ ಕ್ಷೇತ್ರಗಳಲ್ಲೂ ಜನರಿಗೆ ಸುಲಭವಾಗಿ ಸೌಲಭ್ಯ ಸಿಗಬೇಕು. ರಿಂಗ್ ರಸ್ತೆಯಿಂದ ಆರಂಭವಾಗಲಿರುವ 2 ಎಲಿವೇಟೆಡ್ ಕಾರಿಡಾರ್, ಮಳೆಗಾಲುವೆ ಬದಿಯ ಬರ್ ವಲಯದಲ್ಲಿ ರಸ್ತೆ ನಿರ್ಮಾಣ ಸೇರಿ ಬ್ಯಾಟರಾಯನಪಪುರ ಕ್ಷೇತ್ರದಲ್ಲಿ 2,000 ಕೋಟಿ ರೂ. ಮೊತ್ತದ ಕಾಮಗಾರಿ ಜಾರಿಯಾಗಲಿವೆ.
- ಡಿ.ಕೆ.ಶಿವಕುಮಾರ್, ಡಿಸಿಎಂ
ನಮ್ಮಂತಹ ಉದ್ಯೋಗಸ್ಥರಿಗೆ ಇಂತಹ ಶಿಬಿರಗಳ ಮೂಲಕ ಇ- ಖಾತಾ ಪಡೆಯಲು ಅನುಕೂಲವಾಗುತ್ತದೆ. ನನ್ನಲ್ಲಿ ಎ ಖಾತಾ ಸ್ವತ್ತು ಇದ್ದು, ಅಂತಿಮ ದಾಖಲೆ ಪಡೆಯಲು ಇಲ್ಲಿಗೆ ಆಗಮಿಸಿರುವೆ. ಇನ್ನಷ್ಟು ವ್ಯವಸ್ಥಿತವಾಗಿ ಇಂತಹ ಶಿಬಿರಗಳನ್ನು ನಗರದೆಲ್ಲೆಡೆ ಮಾಡಿದರೆ ಜನರಿಗೆ ಅನುಕುಲವಾಗುತ್ತದೆ.
- ಎಸ್.ಆರ್.ಕುಲಕರ್ಣಿ, ರಾಚೇನಹಳ್ಳಿ ನಿವಾಸಿ