

ಮೈಸೂರು: ‘ಭಾರತ ಹಿಂದು ರಾಷ್ಟ್ರವಾದರೆ ದೇಶಕ್ಕೆ ಅಪಾಯಕಾರಿ’ ಎಂಬ ಹೇಳಿಕೆಯನ್ನು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತೆ ಸಮರ್ಥಿಸಿಕೊಂಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರ ತತ್ವಗಳನ್ನ ಒಪ್ಪುವವರು ಎಲ್ಲರೂ ನನ್ನ ಹೇಳಿಕೆಯನ್ನ ತಪ್ಪು ಎಂದು ಹೇಳುವುದಿಲ್ಲ. ಅಂಬೇಡ್ಕರ್ ಅವರು ಹೇಳಿರುವುದನ್ನೇ ನಾನು ಮತ್ತೆ ಹೇಳಿದ್ದೇನೆ ಅಷ್ಟೇ. ಈ ದೇಶ ಜ್ಯಾತ್ಯಾತೀತವಾಗಿರಬೇಕು. ಯಾವುದೇ ಒಂದು ಧರ್ಮದ ವಿಚಾರವಾಗಿ ದೇಶ ಇರಬಾರದು. ಅದು ಯಾವತ್ತಿದ್ದರು ಅಪಾಯಕಾರಿ ಎಂದರು.
ಧರ್ಮದ ಹೆಸರಿನಲ್ಲಿರುವ ಪಾಕಿಸ್ತಾನ ಮತ್ತು ಕೆಲವು ದೇಶಗಳ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣ ನಾನು ಹಿಂದು ರಾಷ್ಟ್ರವಾಗುವುದು ಅಪಾಯಕಾರಿ ಎಂದು ಹೇಳಿದ್ದೇನೆ. ನನ್ನ ಮಾತಿಗೆ ಈಗಲೂ ಬದ್ಧ. ನಾನು ಹೇಳಿರುವುದರಲ್ಲಿ ಯಾವ ತಪ್ಪು ಇಲ್ಲ ಎಂದರು.
ಧರ್ಮದ ವಿಚಾರದಲ್ಲಿ ಕೆಲಸ ಮಾಡುವುದಕ್ಕೆ ಬೇರೆ ವ್ಯವಸ್ಥೆಗಳಿವೆ. ಇದು ಸರ್ಕಾರದ ಕೆಲಸವಾಗಬಾರದು. ಬಿಜೆಪಿ ಅಭಿವೃದ್ಧಿಯನ್ನೇ ಮಾಡದೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಏನನ್ನು ಅಭಿವೃದ್ಧಿ ಮಾಡದ ಬಿಜೆಪಿ ಧರ್ಮದ ವಿಚಾರವನ್ನ ಮುನ್ನಡೆಗೆ ಬಿಟ್ಟು ತನ್ನ ಲೋಪವನ್ನು ಮರೆ ಮಾಚುತ್ತಿದೆ ಎಂದರು.