

ಮಂಗಳೂರು: ಅಗಲಿದ ಶಿಕ್ಷಣ ತಜ್ಞ ಡಾ.ಯಶೋವರ್ಮ ಅವರು ಸಂವೇದನಾಶೀಲ, ಮಾನವ ಅಂತಃಕರಣದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಶಿಸ್ತನ್ನು ರೂಢಿಸಿಕೊಂಡು ಮೌಲ್ಯಾಧಾರಿತ ಬದುಕು ಅವರದ್ದಾಗಿತ್ತು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್, ದ.ಕನ್ನಡ ಜಿಲ್ಲಾ ಕ.ಸಾ.ಪ. ಮತ್ತು ವಿವಿ ಕಾಲೇಜು ಕನ್ನಡ ಸಂಘದ ಸಹಯೋಗದಲ್ಲಿ ಮಂಗಳವಾರ ರವೀಂದ್ರ ಕಲಾ ಭವನದಲ್ಲಿ ನಡೆದ ಸಾಹಿತ್ಯ ಪ್ರೇಮಿ, ಶಿಕ್ಷಣ ತಜ್ಞ ಡಾ.ಬಿ.ಯಶೋವರ್ಮ ಸಂಸ್ಮರಣೆ ಯಶೋಭಿವ್ಯಕ್ತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಸಹಪಾಠಿಯಾಗಿ, ಸಹೋದರನಂತೆ ದೀರ್ಘ ಕಾಲದ ಸಂಬಂಧ ನಮ್ಮದಾಗಿತ್ತು. ಒಳ್ಳೆಯ ವಿಚಾರಗಳ ಯೋಚನೆಗೆ ಯೋಜನೆ ರೂಪಿಸಿ ಅದನ್ನು ಶೇ.100ರಷ್ಟು ಅನುಷ್ಠಾನ ಮಾಡುವಲ್ಲಿ ಅವರು ಶ್ರಮಿಸಿದ್ದರು. ಓದುವ ಅಭಿರುಚಿ ಬೆಳೆಸಿಕೊಂಡಿದ್ದ ಅವರು ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ಶಿಕ್ಷಣ ಸಂದೇಶ, ಮೌಲ್ಯವನ್ನು ನಾಡಿಗೆ ಕೊಟ್ಟವರ ಸಂಸ್ಮರಣೆ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದರು.
ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ನಿರಂಜನ ವಾನಳ್ಳಿ ವಿಶೇಷ ಉಪನ್ಯಾಸ ನೀಡಿದರು. 1993ರಲ್ಲಿ ಎಸ್‌ಡಿಎಂ ಕಾಲೇಜಿಗೆ ಪ್ರಾಂಶುಪಾಲರಾಗಿ ಬಂದಿದ್ದ ಡಾ.ಯಶೋವರ್ಮ ಅವರೊಂದಿಗೆ ಒಂದು ವರ್ಷ ಕೆಲಸ ಮಾಡಲು ಅವಕಾಶ ದೊರಕಿತ್ತು. ಹಾಸ್ಯ ಪ್ರಜ್ಞೆ, ಸೂಕ್ಷ್ಮ ಪ್ರವೃತ್ತಿ ಹೊಂದಿದ್ದ ಅವರು ಆತಿಥ್ಯ ನೀಡುವುದರಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹೆಸರಿನಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡುವ ಕೆಲಸ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು ಎಂದರು.
ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಅತಿಥಿಯಾಗಿದ್ದರು. ಡಾ.ಯಶೋವರ್ಮ ಪ್ರಾಂಶುಪಾಲರ ಸಂಘದಲ್ಲಿದ್ದಾಗ ವಿಶ್ವವಿದ್ಯಾಲಯದ ಆಡಳಿತ ಸುಧಾರಣೆಗೆ ಉತ್ತಮ ಸಲಹೆಗಳನ್ನು ನೀಡಿ, ತಪ್ಪುಗಳನ್ನು ಎತ್ತಿ ಹಿಡಿಯುತ್ತಿದ್ದರು. ಇದರಿಂದ ವಿವಿ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರ ವಹಿಸಲು ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಸತೀಶ್ಚಂದ್ರ ಗೌರವ ಅತಿಥಿಯಾದ್ದರು. ಡಾ.ಯಶೋವರ್ಮರು ಯೋಚನೆ, ಯೋಜನೆ, ಅನುಷ್ಠಾನ ಮತ್ತು ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದರು. ಯಾವುದೇ ವಿಚಾರವನ್ನು ವಿಮರ್ಶೆ ಮಾಡುತ್ತಿದ್ದರು. ಶಿಕ್ಷಣದ ಮೌಲ್ಯವರ್ಧನೆಗೆ ಶ್ರಮಿಸಿದ್ದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಡಾ.ಯಶೋವರ್ಮರು ತನ್ನೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಚರ್ಚಿಸುತ್ತಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತ ಎಂದರು.
ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನಸೂಯ ರೈ, ಡಾ.ಯಶೋವರ್ಮರ ಪತ್ನಿ ಸೋನಿಯಾ ವರ್ಮ, ಪುತ್ರ ಪೂರನ್ ವರ್ಮ ಉಪಸ್ಥಿತರಿದ್ದರು.
ಕ.ಸಾ.ಪ. ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಮಾಧವ ಎಂ.ಕೆ. ಸ್ವಾಗತಿಸಿದರು. ವಿಕಾಸ್ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅಕ್ಕನಲ್ಲಿ ಅಮ್ಮನ ಪ್ರೀತಿ ಕಂಡವರು
ಡಾ.ಯಶು ಮಾವ ಮತ್ತು ಅಮ್ಮ ಹೇಮಾವತಿ ಹೆಗ್ಗಡೆ ಅವರ ಬಾಂಧವ್ಯ ಎಷ್ಟರ ಮಟ್ಟಿಗೆ ಅಂದರೆ ಅಕ್ಕನ ಜತೆ ಅಮ್ಮನ ಪ್ರೀತಿ ಕಂಡವರು. ಇದನ್ನು ಅವರು ನಮ್ಮೊಂದಿಗೆ ಹೇಳಿಕೊಂಡಿದ್ದರು. ಬೆಳಗ್ಗೆ 4 ಗಂಟೆಗೆ ಎದ್ದು 8 ಗಂಟೆ ತನಕ ಓದುತ್ತಿದ್ದರು. ನಾಲ್ಕು ಪುಸ್ತಕ ಕಳುಹಿಸಿದರೆ ವಾರದೊಳಗೆ ಓದಿ ಹಿಂತಿರುಗಿಸುತ್ತಿದ್ದರು. ಅವರು ಓದದ ಪುಸ್ತಕ ಹುಡುಕಿ ಕಳುಹಿಸುವುದೇ ಸವಾಲಾಗಿತ್ತು. ಓದುವಾಗ ಕೆಲವೊಂದು ಜಟಿಲ ಶಬ್ದಗಳ ಅರ್ಥವನ್ನು ಬರೆಯುತ್ತಿದ್ದರು. ಊಟ ಬಿಸಾಡಬಾರದು, ಅಂಗಡಿಗೆ ಹೋಗುವಾಗ ಬಟ್ಟೆ ಚೀಲ ಕೊಂಡು ಹೋಗಬೇಕು ಮೊದಲಾದ ವಿಷಯಗಳನ್ನು ಅವರು ಹೇಳುತ್ತಿದ್ದುದು ನಮ್ಮ ಬದುಕಿನಲ್ಲಿ ರೂಢಿಯಾಗಿದೆ. ಅವರ ನೆನಪು ಚಿರಸ್ಥಾಯಿ ಎಂದು ಗೌರವ ಅತಿಥಿಯಾಗಿದ್ದ ಬೆಂಗಳೂರು ಕ್ಷೇಮವನದ ನಿರ್ದೇಶಕಿ ಶ್ರದ್ಧಾ ಅಮಿತ್ ಹೇಳಿದರು.