

ಮೈಸೂರು: ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್‌ನಿಂದ ನಗರದಲ್ಲಿ ಸಂಯೋಜಿಸಿದ್ದ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಹಿರಿಯ ವೈಣಿಕ ವಿದ್ವಾನ್ ಡಾ.ವಿಶ್ವೇಶ್ವರನ್ ಅವರಿಗೆ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿ ಅವರ ಸಂಸ್ಮರಣೆ ಅಂಗವಾಗಿ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ 29ನೇ ಸಂಗೀತ ಸಮ್ಮೇಳನ-2024ರ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಶಾಸಕ ಎಂ.ಕೃಷ್ಣಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಅವರು, ಜೆಎಸ್‌ಎಸ್ ಸಂಸ್ಥೆ, ಅಕ್ಷರ, ಆರೋಗ್ಯ, ಧಾರ್ಮಿಕ ದಾಸೋಹಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಅಲ್ಲದೆ, ಸಂಗೀತ ಕ್ಷೇತ್ರಕ್ಕೂ ಆದ್ಯತೆ ನೀಡಿದೆ. ಸಂಗೀತ ಸಾಧಕರನ್ನು ಸನ್ಮಾನಿರುವುದು ಸಂತೋಷದ ಸಂಗತಿ ಎಂದರು.
ಜೆಎಸ್‌ಎಸ್ ಸಂಸ್ಥೆ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಸಂಗೀತ ಕ್ಷೇತ್ರದಲ್ಲೂ ವಿವಿಧ ಪ್ರಾಕಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿನಯವೇ ಸಂಪತ್ತು:
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವಿಶ್ವೇಶ್ವರನ್, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ, ನಾವು ಸಣ್ಣವರೇ ಎಂದು ಸಾರ್ವಜನಿಕವಾಗಿ ಪರಿಚಯಿಸಿಕೊಳ್ಳಬೇಕು. ಸಾಧಕರಿಗೆ ವಿನಯವೇ ಸಂಪತ್ತು. ಸಾಧಕ ಎಷ್ಟೇ ಎತ್ತರಕ್ಕೆ ಬೆಳೆದರೂ ಸಣ್ಣವರೇ ಎಂದು ಭಾವಿಸಿದಾಗ ಮಾತ್ರ ಎಲ್ಲ ವರ್ಗದ ಕಲಾ ರಸಿಕರು ನಮ್ಮ ಬಳಿ ಬಂದು ಬೆರೆಯುತ್ತಾರೆ. ಇಲ್ಲದಿದ್ದರೆ ನಮ್ಮ ಬಳಿ ಒಬ್ಬರೂ ಸುಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಗಾಯನ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಕಲಾಶ್ರೀ ಪುರಸ್ಕಾರಕ್ಕೆ ಭಾಜನವಾಗಿದೆ. ಕಳೆದ 3 ದಶಕಗಳಿಂದ ನಾಡಿನ ವಿವಿಧ ರಾಜ್ಯ ಕಲಾವಿದರನ್ನು ಒಂದೆಡೆ ಸೇರಿಸಿ ಅವರನ್ನು ಸಾಂಸ್ಕೃತಿಕವಾಗಿ ಮುಖ್ಯವಾಹಿನಿಗೆ ತಂದು ಸಂಗೀತ ರಸಾನುಭವವನ್ನು ಶ್ರೋತೃಗಳಿಗೆ ದೊರೆಯುವಂತೆ ಮಾಡಿದೆ ಎಂದವರು ಶ್ಲಾಘಿಸಿದರು.
ಪೀಟಿಲು ವಾದಕ ಮೈಸೂರು ಡಾ.ನಾಗರಾಜು, ಮೈಸೂರು ಡಾ.ಮಂಜುನಾಥ್, ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಕಣ್ಣನ್, ಪ್ರೊ.ಕೆ.ರಾಮಮೂರ್ತಿ ರಾವ್ ಇತರರು ಇದ್ದರು. ವಿದುಷಿ ಭಾರ್ಗವಿ ವೆಂಕಟರಾಂ ಗಾಯನ ಪ್ರಸ್ತುತ ಪಡಿಸಿದರು. ವಿದ್ವಾನ್ ವೈಭವ್ ರಮಣಿ (ವಯೋಲಿನ್), ವಿದ್ವಾನ್ ಬಿ.ಎಸ್.ಪ್ರಶಾಂತ್ ಮೃದಂಗ ಪಕ್ಕವಾದ್ಯ ಸಹಕಾರ ನೀಡಿದರು.