

ಮಂಗಳೂರು: ಇತರ ಕಾಯಿಲೆಗಳಿಗೆ ಹೋಲಿಕೆ ಮಾಡಿದರೆ ‘ಕೋವಿಡ್-19’ ಹೆದರಬೇಕಾದ ರೋಗವೇ ಅಲ್ಲ. ಅಂಕಿ ಅಂಶ ಪ್ರಕಾರ ಶೇ.96ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ನಾವು ಮಾನಸಿಕವಾಗಿ ಧನಾತ್ಮಕವಾಗಿದ್ದಷ್ಟು, ಕರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದಂತೆ. ಕರೊನಾ ಬಂದರೆ ಸಾವು ಖಚಿತ ಎಂದು ಎಲ್ಲೂ ಹೇಳಿಲ್ಲ...
ಇದು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಇಎನ್‌ಟಿ ವೈದ್ಯರಾಗಿರುವ ಡಾ.ವಿಶ್ವಾಸ್ ಕೆ.ಪೈ ಅವರ ಮಾತು.
ಸ್ವತಃ ಕರೊನಾ ಸೋಂಕಿತರಾಗಿ 24 ದಿನ ಕ್ವಾರಂಟೈನ್ ಮುಗಿಸಿರುವ ಅವರು, ಮತ್ತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ವಿಶ್ವಾಸ್ ಅವರ ಪತ್ನಿ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಾಜಿ ಅಧ್ಯಕ್ಷೆ ವಾತಿಕಾ ಪೈ, ತಂದೆ ಉದ್ಯಮಿ ಎಚ್.ಕಮಲಾಕ್ಷ ಪೈ ಅವರೂ ಕರೊನಾ ಸೋಂಕಿನಿಂದ ಗುಣವಾಗಿ ಈಗ ಮನೆಯಲ್ಲಿ ಕ್ವಾರಂಟೈನ್‌ನ ಅಂತಿಮ ಹಂತದಲ್ಲಿದ್ದಾರೆ.
ಮೂವರೂ ಕರೊನಾ ವಿಚಾರದಲ್ಲಿ ಧನಾತ್ಮಕವಾಗಿದ್ದು, ಎಲ್ಲ ನಿಯಮಾವಳಿಗಳನ್ನು ಪಾಲಿಸಿದ್ದರಿಂದಾಗಿ ಯಶಸ್ವಿಯಾಗಿ ಅದರಿಂದ ಹೊರ ಬಂದಿದ್ದೇವೆ ಎಂದಿರುವ ಡಾ.ವಿಶ್ವಾಸ್ ಪೈ, ‘ವಿಜಯವಾಣಿ’ ಓದುಗರಿಗಾಗಿ ಕೆಲವೊಂದು ಸಲಹೆ ನೀಡಿದ್ದಾರೆ.
ವೈದ್ಯರ ಸಲಹೆ ಪಡೆಯಿರಿ: ಕರೊನಾ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಗಂಟಲುನೋವು ಮೊದಲಾದವುಗಳು ಕಾಣಿಸಿಕೊಂಡರೆ ಮೊದಲು ವೈದ್ಯರನ್ನು ಭೇಟಿಯಾಗಿ ಅವರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಸಾಕಷ್ಟು ಮಂದಿ ವೈದ್ಯರಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಆ ಮೂಲಕ ಸ್ವತಃ ಸಮಸ್ಯೆ ಅನುಭವಿಸುವುದು ಮಾತ್ರವಲ್ಲದೆ, ಕುಟುಂಬ, ಸಮಾಜಕ್ಕೂ ಸೋಂಕು ಹರಡಲು ಕಾರಣರಾಗುತ್ತಾರೆ. ಇದು ಸಲ್ಲದು, ವೈದ್ಯರು ಸೂಚಿಸಿದರೆ ಕರೊನಾ ತಪಾಸಣೆ ನಡೆಸಿ.
ನಿಯಮಾವಳಿ ಸರಳ: ಈಗ ಕರೊನಾ ಬಂದವರು ಅನುಸರಿಸಬೇಕಾದ ನಿಯಮಾವಳಿಗಳು ಕೆಲವು ತಿಂಗಳ ಹಿಂದೆ ಇದ್ದುದಕ್ಕಿಂತ ಹೆಚ್ಚು ಸರಳವಾಗಿದೆ. ಲಕ್ಷಣಗಳಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲಿಸುತ್ತಾರೆ. ಸೋಂಕಿತರಾಗಿದ್ದರೂ ಒಂದು ವೇಳೆ ಲಕ್ಷಣವಿಲ್ಲದಿದ್ದರೆ, ಮನೆಯಲ್ಲಿ ವ್ಯವಸ್ಥೆಯಿದ್ದರೆ ಮನೆಯಲ್ಲೇ ಇರಬಹುದಾಗಿದೆ. ದೇಹದ ತಾಪಮಾನ, ಪಲ್ಸ್ ರೇಟ್ ಮೊದಲಾದವುಗಳನ್ನು ನಾವೇ ಪರೀಕ್ಷಿಸಿಕೊಳ್ಳಲು ಸಾಧ್ಯವಿದೆ. ಆಸ್ಪತ್ರೆಯಲ್ಲಿದ್ದರೂ, ಲಕ್ಷಣಗಳಿದ್ದರೆ ಮಾತ್ರ 5 ದಿನ ಮಾತ್ರೆಗಳನ್ನು ನೀಡುತ್ತಾರೆ. 10ನೇ ದಿನವಾಗುವಾಗ ಲಕ್ಷಣಗಳು ಇಲ್ಲದಿದ್ದರೆ ಅಲ್ಲಿಂದಲೂ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸುತ್ತಾರೆ.
ಅಂತರ ಪಾಲನೆ ಅವಶ್ಯ: ಇನ್ನೊಬ್ಬರೊಂದಿಗೆ ಸಾಕಷ್ಟು ಅಂತರ ಪಾಲಿಸುವುದು ಮಾತ್ರವೇ ನಮ್ಮನ್ನು ಕರೊನಾದಿಂದ ದೂರ ಇರಿಸುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ, ನಮ್ಮಲ್ಲಿ ಈಗಲೂ ದೈಹಿಕ ಅಂತರವನ್ನು ಪಾಲಿಸುವಲ್ಲಿ ಜನರು ಸಾಕಷ್ಟು ಹಿಂದೆ ಇದ್ದಾರೆ. ಮುಖ್ಯವಾಗಿ ಜನರು ಹೆಚ್ಚಾಗಿ ಸೇರುವ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಲೇ ಬೇಕು.
ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು, ಅದರಲ್ಲೂ ಮುಖ್ಯವಾಗಿ 60 ವರ್ಷ ಮೇಲ್ಪಟ್ಟವರು ಮಾತ್ರ ಕರೊನಾ ವಿಚಾರದಲ್ಲಿ ಹೆಚ್ಚು ಜಾಗ್ರತೆವಹಿಸಬೇಕಾದ ಅವಶ್ಯಕತೆಯಿದೆ. ಸಾವಿನ ಪ್ರಮಾಣ ಶೇ.3ರಷ್ಟು ಮಾತ್ರ ಇರುವುದರಿಂದ ಹೆದರಬೇಕಿಲ್ಲ. - ಡಾ.ವಿಶ್ವಾಸ್ ಕೆ. ಪೈ, ಕರೊನಾದಿಂದ ಗುಣವಾದವರು