ಸ್ತ್ರೀ ಧ್ವನಿಯಾಗಿದ್ದ ಡಾ.ವಿಜಯಾ ದಬ್ಬೆ

14blrp6
ಸಾಹಿತಿ ಹಾಗೂ ಮಹಿಳಾ ಚಿಂತಕಿ ಡಾ.ವಿಜಯ ದಬ್ಬೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ತಾಲೂಕು ಕಸಾಪದಿಂದ ಸನ್ಮಾನಿಸಲಾಯಿತು.
Published on

ಬೇಲೂರು : ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲದ ಸಂದರ್ಭ ಅವರಿಗೆ ಧ್ವನಿಯಾಗಿ ತಮ್ಮ ಸಾಹಿತ್ಯದ ಮೂಲಕವೇ ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸಿ ಕೊಟ್ಟ ಧೀಮಂತ ಸಾಹಿತಿ, ಚಿಂತಕಿ ಬೇಲೂರು ತಾಲೂಕಿನ ಡಾ.ವಿಜಯಾ ದಬ್ಬೆ ಎಂದು ತಹಸೀಲ್ದಾರ್ ಎಂ.ಮಮತಾ ಬಣ್ಣಿಸಿದರು.

ಸಾಹಿತಿ ಹಾಗೂ ಮಹಿಳಾ ಚಿಂತಕಿ ಡಾ.ವಿಜಯಾ ದಬ್ಬೆ ಅವರ ಜನ್ಮದಿನಾಚರಣೆ ಹಾಗೂ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಅಂಗವಾಗಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದ ಸಂದರ್ಭ ಡಾ.ವಿಜಯ ದಬ್ಬೆ ಅವರು ತಮ್ಮ ಸಾಹಿತ್ಯದ ಮೂಲಕ ಹೆಣ್ಣು ಕೇವಲ ಸಾಂಸಾರಿಕ ಜೀವನಕ್ಕೆ ಸೀಮಿತವಲ್ಲ. ಅವರು ಎಲ್ಲ ಕ್ಷೇತ್ರದಲ್ಲೂ ಸಾಧಿಸ ಬಲ್ಲಳು ಎಂದು ತಿಳಿಸಿದ್ದರಲ್ಲದೆ, ಅವರ ಸಮಸ್ಯೆ ಹೇಳಿಕೊಳ್ಳಲು ವೇದಿಕೆಯನ್ನು ತಮ್ಮ ಸಾಹಿತ್ಯದ ಮೂಲಕವೇ ನಿರ್ಮಿಸಿ ಕೊಟ್ಟವರು. ವಿಜಯಾದಬ್ಬೆ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಕನ್ನಡದಲ್ಲಿ ಸ್ತ್ರೀ ವಾದಿ ವಿಮರ್ಶೆಯ ಅಡಿಪಾಯ ಹಾಕಿ, ಮಹಿಳೆಯರ ಶೋಷಣೆ ವಿರುದ್ಧ ಹೋರಾಡಿದವರು. ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಮಾ.ನ.ಮಂಜೇಗೌಡ ಮಾತನಾಡಿ, ಪ್ರತಿ ವರ್ಷ ಕಸಾಪದಿಂದ ಸಾಹಿತಿ, ಚಿಂತಕಿ ವಿಜಯಾ ದಬ್ಬೆ ಅವರ ಜಯಂತಿ ಅಂಗವಾಗಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುನಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸದತ್ತ ಮುನ್ನಗ್ಗಲು ಪ್ರೋತ್ಸಾಹಿಸಬೇಕು ಎಂದರು.

ಉಪನ್ಯಾಸಕಿ ಹಾಗೂ ಚಿಂತಕಿ ಚಿಕ್ಕಮಗಳೂರಿನ ನಾಗಲಕ್ಷ್ಮೀ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಕನ್ನಡದಲ್ಲಿ ಮೊದಲ ಬಿಎ ಪದವಿಯ ಕನ್ನಡದಲ್ಲಿ ಪಡೆದ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಮಹಿಳೆ ವಿಜಯಾ ದಬ್ಬೆಯವರು. ತಮ್ಮಲ್ಲಿ ಶಕ್ತಿ ಸಾಮರ್ಥ್ಯದ ಹೋರಾಟಗಳನ್ನು ಮೈಗೂಡಿಸಿ ಕೊಂಡವರು. ಅವರು ಮಹಿಳೆಯರು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಅಂದೆ ತೋರಿಸಿಕೊಟ್ಟಿದ್ದರ ಫಲವಾಗಿ ಇಂದು ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸ್ಥಾನಮಾನ ಸಿಕ್ಕಿದೆ. ವಿಜಯಾ ದಬ್ಬೆ ಅವರ ರೀತಿಯಲ್ಲೇ ಮಹಿಳೆಯರು ಸಮಾಜದ ಒಳಿತಿಗೆ ಮುಂದಾಗಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುನಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪುರಸಭಾ ಅಧ್ಯಕ್ಷೆ ಉಷಾ ಸತೀಶ್, ಕಸಾಪ ಮಾಜಿ ಅಧ್ಯಕ್ಷರಾದ ಮಾ.ಶಿವಮೂರ್ತಿ, ರಾಜೇಗೌಡ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ, ಸಾಹಿತಿ ಇಂದಿರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net