

ಮೈಸೂರು: ಶಿವಮೊಗ್ಗದ ‘ಅಹರ್ನಿಶಿ’ ಪ್ರಕಾಶನ ಪ್ರಕಟಿಸಿರುವ ಲೇಖಕಿ ಡಾ.ಎಂ.ಉಷಾ ಅವರ ‘ಬಾಳ ಬಟ್ಟೆ’ ಕಾದಂಬರಿಯನ್ನು 2024ನೇ ಸಾಲಿನ ‘ಡಾ. ವಿಜಯಾ ದಬ್ಬೆ’ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಫಲಕವನ್ನು ಒಳಗೊಂಡಿದೆ.
ನಗರದ ಸಮತಾ ಅಧ್ಯಯನ ಕೇಂದ್ರವು 2022ರಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಗೆ 2020 - 2023ರ ಅವಧಿಯಲ್ಲಿ ಮಹಿಳೆಯರು ಪ್ರಕಟಿಸಿದ ಕಾದಂಬರಿಗಳನ್ನು ಆಹ್ವಾನಿಸಲಾಗಿತ್ತು. ಲೇಖಕಿಯರು, ಪ್ರಕಾಶಕರು ಕಳುಹಿಸಿದ್ದ 24 ಕಾದಂಬರಿಗಳನ್ನು ಅವಲೋಕಿಸಿದ ಪ್ರೊ.ಒ.ಎಲ್. ನಾಗಭೂಷಣಸ್ವಾಮಿ, ಡಾ.ಡಿ.ವಿಜಯಲಕ್ಷ್ಮಿ, ಡಾ.ಎಚ್.ಎಂ.ಕಲಾಶ್ರೀ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಉಷಾ ಅವರ ಮೊದಲ ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ವಿಜಯಾ ದಬ್ಬೆ ಹೆಸರಿನ ಪ್ರಶಸ್ತಿಯನ್ನು ಅವರ ವಿದ್ಯಾರ್ಥಿನಿಯೂ ಆದ ಭಾಷಾಂತರ, ಮಹಿಳಾ ಅಧ್ಯಯನ, ಸಾಹಿತ್ಯ ವಿಮರ್ಶೆ, ಸಾಂಸ್ಕೃತಿಕ ಅಧ್ಯಯನಗಳಲ್ಲಿ ಎರಡೂವರೆ ದಶಕದಿಂದ ತೊಡಗಿಸಿಕೊಂಡಿರುವ ಉಷಾ ಅವರಿಗೆ ನೀಡಲು ಸಂಸ್ಥೆ ಹೆಮ್ಮೆಪಡುತ್ತದೆ. ಜುಲೈ 21ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆಯವರಾದ ಎಂ.ಉಷಾ ಅವರು, ಮೈಸೂರು ವಿವಿಯಲ್ಲಿ ಎಂಎ, ಬೆಂಗಳೂರು ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದರು. ಹಂಪಿ ಕನ್ನಡ ವಿವಿ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಬಳಿಕ 2019ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.