ಸಾಮಾಜಿಕ ಕ್ರಾಂತಿ, ಅಭಿವೃದ್ಧಿಯ ಕಾಂತಿ; ಸರ್ಕಾರಗಳಿಗೂ ಮಾದರಿ ಧರ್ಮಸ್ಥಳದ ಯೋಜನೆಗಳು..

Clubhouse
Published on
ನಾಡಿನ ಪ್ರಮುಖ ಧಾರ್ವಿುಕ, ಆಧ್ಯಾತ್ಮಿಕ ಸ್ಥಳವಾಗಿ ಗುರುತಿಸಿಕೊಂಡಿರುವ ಧರ್ಮಸ್ಥಳ ಸಾಮಾಜಿಕ, ಸಾಂಸ್ಕೃತಿಕ ಉತ್ಥಾನದಲ್ಲೂ ಮಾದರಿ ಎನಿಸಿದೆ. ಇಲ್ಲಿನ ಯೋಜನೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ, ದೇಶದಾದ್ಯಂತ ಬದಲಾವಣೆಯ ಅಲೆ ಸೃಷ್ಟಿಸಿವೆ. ಈ ಸಾಮಾಜಿಕ ಕ್ರಾಂತಿಯನ್ನು ಸದ್ದಿಲ್ಲದೇ ಸಾಧಿಸಿದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ. ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ವಾಹಿನಿಯ ಕ್ಲಬ್​ಹೌಸ್ ಸಂವಾದದಲ್ಲಿ ಖುದ್ದು ಧರ್ವಧಿಕಾರಿಗಳೇ ಈ ಪಯಣವನ್ನು ವಿವರಿಸಿದರು. ಹಲವು ಕ್ಷೇತ್ರಗಳ ಗಣ್ಯರು ಅನುಭವ ಹಂಚಿಕೊಂಡರು.

| ಡಾ.ಡಿ.ವೀರೇಂದ್ರ ಹೆಗ್ಗಡೆ

ಶ್ರೀಕ್ಷೇತ್ರ ಧರ್ಮಸ್ಥಳದ ಎಲ್ಲ ಕಾರ್ಯಗಳಲ್ಲಿ ಮಂಜುನಾಥ ಸ್ವಾಮಿ ಸಾಕ್ಷಾತ್ ಇದ್ದಾರೆ ಎಂಬ ಶ್ರದ್ಧೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಕ್ಷೇತ್ರದ ಧರ್ಮದೇವತೆಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿ ಹೆಗ್ಗಡೆಯವರನ್ನು ಮಾಧ್ಯಮವಾಗಿರಿಸಿಕೊಂಡು ಸಂದೇಶಗಳನ್ನು ಭಕ್ತರಿಗೆ ನೀಡುತ್ತಾರೆ. ಸ್ವಾಮಿಯ ಸೇವೆಯಲ್ಲಿ ಲೋಪ ಬರದಂತೆ ಹೆಗ್ಗಡೆಯವರಿಗೆ ಆದೇಶ ಕೊಡುತ್ತಿರುತ್ತಾರೆ. ಪ್ರತಿ ತಿಂಗಳೂ ಹೆಗ್ಗಡೆಯವರು ಕ್ಷೇತ್ರದ ಅನ್ನದಾನ, ಜ್ಞಾನದಾನ, ಔಷಧದಾನ, ಅಭಯದಾನದ ಬಗ್ಗೆ ಧರ್ಮದೇವತೆಗಳಿಗೆ ವರದಿ ಒಪ್ಪಿಸುವುದು ಧರ್ಮಸ್ಥಳದ ವಿಶೇಷ.

ಕ್ಷೇತ್ರದ ಅನ್ನದಾನ ಬಡವರಿಗೆ ದಾನವೆಂದು ಅರ್ಥವಲ್ಲ. ಇದು ಅನ್ನದಾಸೋಹ. ವಿದ್ಯಾದಾನ ಅಥವಾ ಜ್ಞಾನದಲ್ಲಿ ಆಧುನಿಕ ಪದ್ಧತಿಯ ಶಿಕ್ಷಣ, ನಮ್ಮ ಚಿಂತನೆ ಹೆಚ್ಚಿಸುವ ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಒಳಗೊಂಡಿರುತ್ತವೆ. ಶ್ರೀಮಂಜುನಾಥ ಸ್ವಾಮಿ ಮೃತ್ಯುಂಜಯ. ಪೂರ್ವಜರಿಂದ ಬಂದ ಶಾಪ, ದೋಷಗಳ ಪರಿಹಾರಕ್ಕಾಗಿ ಸ್ವಾಮಿಗೆ ಅಭಿಷೇಕವಾದ ತೀರ್ಥದಲ್ಲಿ ಸ್ನಾನ ಮಾಡಿಸಿ ಮುಕ್ತಿ ಕೊಡುವಂಥದ್ದು ಔಷಧದಾನದ ಸಾಂಪ್ರದಾಯಿಕ ಒಂದು ವಿಧಾನ. ಇನ್ನೊಂದು ಆಧುನಿಕ ವೈದ್ಯಕೀಯ ಪದ್ಧತಿ, ಆಯುರ್ವೆದ, ಪ್ರಾಕೃತಿಕ ಚಿಕಿತ್ಸೆ ನೀಡಲಾಗುತ್ತಿದೆ. ಅಭಯದಾನ ಎಲ್ಲಕ್ಕಿಂತ ಶ್ರೇಷ್ಠ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಮಾರ್ಗದರ್ಶನ, ಸಾಂತ್ವನ ಕೊಡುವಂಥದ್ದು. ಇದೇ ಕಲ್ಪನೆಯಲ್ಲಿ ಗ್ರಾಮೀಣಾಭಿವೃದ್ಧಿ, ಸ್ವ್ವದ್ಯೋಗ ತರಬೇತಿ ನಡೆಯುತ್ತವೆ. ಅಭಯದಾನ ಕೊಡುವುದು ಹೆಗ್ಗಡೆಯವರ ಮುಖ್ಯ ಕರ್ತವ್ಯ.

ಎಲ್ಲ ಧರ್ಮಗಳ ಸಾರ ಒಂದೇ

ಎಲ್ಲ ಧರ್ಮಗಳ ಸಾರ, ಗುರಿ ಒಂದೇ. ಈ ಕಾರ್ಯಕ್ಕಾಗಿ ಎಲ್ಲ ಧರ್ಮದವರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿ ಅವರ ಮಾತುಗಳನ್ನು ಕೇಳುವಂತಾಗಲು ಪೂಜ್ಯ ಮಂಜಯ್ಯ ಹೆಗ್ಗಡೆಯವರು ಸರ್ವಧರ್ಮ ಸಾಹಿತ್ಯ ಸಮ್ಮೇಳನ ಆರಂಭಿಸಿದರು. ಅವರ ಬಳಿಕ ರತ್ನವರ್ಮ ಹೆಗ್ಗಡೆ ಮುಂದುವರಿಸಿದರು. ಬಳಿಕ ನಾನು ಕೈಗೆತ್ತಿಕೊಂಡಿದ್ದೇನೆ. ಧರ್ಮ ನಮ್ಮ ಉಸಿರಿನ ಹಾಗೆ. ಧರ್ಮವನ್ನು ಧಾರಣೆ ಮಾಡಿದರೆ ಅದು ನಮ್ಮನ್ನು ಸ್ವಾಭಾವಿಕವಾಗಿ ನಡೆಸಿಕೊಂಡು ಹೋಗುತ್ತದೆ. ಧಾರ್ವಿುಕ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಲು ಸಾಂಸ್ಕೃತಿಕ ಮಾರ್ಗ ಸುಲಭವಾಗುತ್ತದೆ. ಶ್ರೀಸಾಮಾನ್ಯನಿಗೆ ಧರ್ಮದ ವಿಚಾರಗಳನ್ನು ತಲುಪಿಸಲು ಹಿರಿಯರು ಜನಪದ ಸಾಹಿತ್ಯವಾಗಿ ಯಕ್ಷಗಾನ ಆರಂಭಿಸಿದ್ದಾರೆ. ಧರ್ಮಸ್ಥಳದ ಯಕ್ಷಗಾನ ಮೇಳಕ್ಕೆ 200 ವರ್ಷಗಳ ಇತಿಹಾಸವಿದೆ. ಇದು ವರ್ಷಕ್ಕೆ 180ರಿಂದ 200 ಪ್ರದರ್ಶನಗಳನ್ನು ನೀಡುತ್ತದೆ. ಜತೆಗೆ ಜ್ಞಾನ ವಿಕಾಸ, ಮಹಿಳಾ ವಿಕಾಸ ಮೊದಲಾದ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಹಿಳೆಯರಿಗೆ ಜಾಗೃತಿ ಮೂಡಿಸುವಂಥ, ಕೌಟುಂಬಿಕ ಮತ್ತು ಗ್ರಾಮ ಸಾಮರಸ್ಯ ಕಾಪಾಡುವ ಕಾರ್ಯ ಕ್ಷೇತ್ರದಿಂದ ನಡೆಯುತ್ತಿದೆ.

ಎಲ್ಲರಿಗೂ ಒಂದೇ ಶುಭಮುಹೂರ್ತ

ಬದುಕಿನಲ್ಲಿ ಸಾಮೂಹಿಕವಾಗಿ ಹೆಚ್ಚು ಸಂಭ್ರಮ ಪಡುವ ಒಂದು ಸಂದರ್ಭ ವಿವಾಹ. ಇದರಲ್ಲಿ ಅನೇಕ ಕಿಲುಬುಗಳು ಸೇರಿಕೊಂಡಿದ್ದವು. 45 ವರ್ಷ ಹಿಂದೆ ವರದಕ್ಷಿಣೆ ದೊಡ್ಡ ಪಿಡುಗಾಗಿತ್ತು. ಒಂದು ಕಡೆ ದುಂದುವೆಚ್ಚ, ಮದುವೆ ವ್ಯವಸ್ಥೆ ಗಾಗಿ ಕುಟುಂಬದ ಕಷ್ಟ, ಶ್ರೀಮಂತರನ್ನು ಅನುಕರಣೆ ಮಾಡಲು ಬಡವರು ಮತ್ತು ಮಧ್ಯಮ ವರ್ಗದವರು ನಡೆಸುವ ಶ್ರಮ ಹೇಳತೀರದು. ಇದನ್ನು ಕಂಡು ಹುಟ್ಟಿದ್ದು ಧರ್ಮಸ್ಥಳದ ಸಾಮೂಹಿಕ ವಿವಾಹ ಪರಿಕಲ್ಪನೆ. 1972ರಲ್ಲಿ ಆಯೋಜಿಸಿದ ಪ್ರಥಮ ಸಾಮೂಹಿಕ ವಿವಾಹದಲ್ಲೇ 489 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಶ್ರೀ ಕ್ಷೇತ್ರದಲ್ಲಿ ನಡೆದ ಈ ವಿವಾಹದಲ್ಲಿ 100 ಜಾತಿಗಳ ಜನರಿಗೆ ಒಂದೇ ಶುಭಮುಹೂರ್ತ. ಅಂದಿನಿಂದ ಈ ಕಾರ್ಯಕ್ರಮ ನಿರಂತರ ನಡೆದುಕೊಂಡು ಬರುತ್ತಿದೆ. ನಂತರದ ದಿನಗಳಲ್ಲಿ ಲಯನ್ಸ್, ರೋಟರಿಯಂಥ ಸಂಸ್ಥೆಗಳು ಕೂಡ ಸಾಮೂಹಿಕ ವಿವಾಹ ಆಯೋಜಿಸಲು ಆರಂಭಿಸಿದವು. ಈಗ ಸಾಮೂಹಿಕ ವಿವಾಹ ಸರ್ಕಾರದ ಕಾರ್ಯಕ್ರಮವಾಗಿಯೂ ರೂಪುಗೊಂಡಿದೆ.

ದೇವಾಲಯಗಳ ಜೀಣೋದ್ಧಾರ

ಸರ್ಕಾರದ ಸಹಭಾಗಿತ್ವದಲ್ಲಿ 250ಕ್ಕೂ ಅಧಿಕ ಪ್ರಾಚೀನ ದೇವಾಲಯಗಳನ್ನು ಜೀಣೋದ್ಧಾರ ಮಾಡಿದ್ದೇವೆ. ಕಾಮಗಾರಿ ನಡೆಸಲು ಅಗತ್ಯ ಒಟ್ಟು ಮೊತ್ತದ ಶೇ.40 ಸರ್ಕಾರ, ಶೇ.40 ಧರ್ಮಸ್ಥಳ ಹಾಗೂ ಶೇ.20 ಊರಿನ ಭಕ್ತರೇ ತೊಡಗಿಸಿಕೊಳ್ಳುವ ಕ್ಷೇತ್ರ ಜೀಣೋದ್ಧಾರ ಕಾರ್ಯಕ್ಕೆ ರಾಣಿ ಸತೀಶ್ ಸಚಿವರಾಗಿದ್ದ ಅವಧಿಯಲ್ಲಿ ಬೆಂಬಲ ಕೊಟ್ಟಿದ್ದಾರೆ. ಸರ್ಕಾರ ಒದಗಿಸುವ ಶೇ.40 ಮೊತ್ತವನ್ನು ಒಂದು ಕೋಟಿ ರೂ.ನಿಂದ ಎರಡು ಕೋಟಿ ರೂ.ಗೆ ಏರಿಸಿದೆ.

ಶ್ರೇಷ್ಠ ಸ್ವಚ್ಛತಾ ಧಾರ್ವಿುಕ ಕೇಂದ್ರ

ಮಡಿ ಅಂದರೆ ಅಸ್ಪೃಶ್ಯತೆ ಎಂದು ಅರ್ಥವಲ್ಲ. ಮಡಿ ಅಂದರೆ ಸುತ್ತಲಿನ ವಾತಾವರಣ ಶುದ್ಧವಾಗಿಡುವುದು. ಸಾರ್ವಜನಿಕ ಶೌಚಗೃಹಗಳಲ್ಲಿ ಸ್ವಚ್ಛತೆ ಕಾಪಾಡುವುದು ದೊಡ್ಡ ಸವಾಲು. ನಮ್ಮ ಕಾರ್ಯಕರ್ತರು ಈ ವಿಷಯವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ನದಿ ತೀರದಲ್ಲಿರುವ ಸ್ನಾನಘಟ್ಟ ಹೊರತುಪಡಿಸಿ ಕ್ಷೇತ್ರದ ಎಲ್ಲ ಭಾಗಗಳನ್ನು ಹೆಚ್ಚು ಸ್ವಚ್ಛವಾಗಿಡುವಲ್ಲಿ ಯಶಸ್ವಿಯಾಗಿದ್ದೇವೆ. ಅಖಿಲ ಭಾರತ ಮಟ್ಟದಲ್ಲಿ ‘ಶ್ರೇಷ್ಠ ಸ್ವಚ್ಛತಾ ಧಾರ್ವಿುಕ ಕೇಂದ್ರ’ ಪ್ರಶಸ್ತಿಯನ್ನು ‘ಇಂಡಿಯಾ ಟುಡೇ’ ಪತ್ರಿಕೆ ನಮಗೆ ನೀಡಿದೆ.

ಮೀಸಲಾತಿಗಾಗಿ ಕಾಯುತ್ತಿಲ್ಲ

ಇಂದು ಮೀಸಲಾತಿ ಮೂಲಕ ಅನಿವಾರ್ಯ ಸಂದರ್ಭಗಳಲ್ಲಿ ಕೆಲವು ಮಹಿಳೆಯರು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿ ಆಯ್ಕೆಯಾಗಿ ರಬಹುದು. ಆದರೆ ಯಾವುದೇ ಕಾರ್ಯಕ್ರಮ ಅಭ್ಯಾಸವಾಗಲು ಕಾಲಾವಕಾಶ ಬೇಕು. ಇಂದು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಹಕಾರಿ ಸಂಘಗಳಲ್ಲಿ ಮಹಿಳೆಯರು ಸ್ವಯಂಪ್ರೇರಿತರಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಮೀಸಲಾತಿಗಾಗಿಯೇ ಅವರು ಕಾಯುತ್ತಿಲ್ಲ. ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಯುತ್ತಿದೆ. ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ‘ಜ್ಞಾನವಿಕಾಸ’ ಮೂಲಕ ಹೇಮಾವತಿ ಹೆಗ್ಗಡೆಯವರು ಮಾಹಿತಿ ನೀಡುತ್ತಿದ್ದಾರೆ. ಮಹಿಳೆಯರು ಮೀಸಲಾತಿ ಮೀರಿ, ನಾಯಕತ್ವ ಗುಣದಿಂದ ಹಕ್ಕಿನಿಂದ ಅಧಿಕಾರ ಪಡೆಯಬೇಕು.

ದೇಶದಾದ್ಯಂತ 567 ಉದ್ಯೋಗ ತರಬೇತಿ ಸಂಸ್ಥೆ

ನಮ್ಮ ದೇಶದಲ್ಲಿ 40 ವರ್ಷಗಳ ಹಿಂದೆ ಎಲ್ಲರೂ ಉದ್ಯೋಗಾಕಾಂಕ್ಷಿಗಳಾಗಿದ್ದರು. ಕಚೇರಿಗೆ ಹೋಗಿ ಸಂಪಾದನೆ ಮಾಡುವ ಬದಲು ಮನೆಯಲ್ಲೇ ಇದ್ದುಕೊಂಡು ಉದ್ಯೋಗ ಮಾಡಬಹುದು ಎಂಬ ಪರಿಕಲ್ಪನೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ ಆರಂಭಗೊಂಡಿತು. ಭಾರತದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ಯೋಜನೆ ಕೈಗೆತ್ತಿಕೊಂಡು ದೇಶದಾದ್ಯಂತ 567 ಸಂಸ್ಥೆಗಳನ್ನು ಸ್ಥಾಪಿಸಿದಾಗ ನಮ್ಮ ಕನಸಿಗೆ ನಿಜವಾದ ಅರ್ಥ ಬಂತು. ಸರ್ಕಾರ ಪ್ರತಿ ಸಂಸ್ಥೆಗೆ 1 ಕೋಟಿ ರೂ. ಅನುದಾನ, ನಿರ್ವಹಣೆ ವೆಚ್ಚ ನೀಡುತ್ತಿದೆ. ರುಡ್​ಸೆಟ್​ನಲ್ಲಿ 30 ದಿನಗಳ ತರಬೇತಿ ಕೊಡುತ್ತೇವೆ. ಇಲ್ಲಿ ಕಲಿತ, ಅನುಭವ ಪಡೆದ ಸ್ವಉದ್ಯೋಗಾಕಾಂಕ್ಷಿಗಳಿಗೆ ಬ್ಯಾಂಕಿನಿಂದ ಸರಳವಾಗಿ ಸಾಲ ಸಹಾಯ ದೊರಕುತ್ತದೆ. ಇಲ್ಲಿ ಕಲಿತ 24 ಲಕ್ಷಕ್ಕೂ ಅಧಿಕ ಮಂದಿ ಸ್ವಉದ್ಯೋಗಿಗಳಾಗಿದ್ದಾರೆ. ಸ್ವಂತ ಗ್ರಾಮದಲ್ಲೇ ಉದ್ಯೋಗ ಸ್ಥಾಪಿಸಿ, ಅಲ್ಲೇ ಸಂಪತ್ತು ಹಂಚಿಕೊಂಡು ಬೆಳೆಯುತ್ತಿದ್ದಾರೆ.

ತರಬೇತುದಾರರ ತರಬೇತು ಸಂಸ್ಥೆ: ದೇಶದಾದ್ಯಂತ ಇರುವ ಗ್ರಾಮೀಣಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆಯ ತರಬೇತುದಾರರಿಗೆ ಟ್ರೇನಿಂಗ್ ನೀಡಲು ಬೆಂಗಳೂರಿನಲ್ಲಿ ಪ್ರತ್ಯೇಕ ಸಂಸ್ಥೆ ಸ್ಥಾಪನೆಯಾಗುತ್ತಿದೆ. ಮುಂದೆ ಇದು ಲಕ್ಷಾಂತರ ಮಂದಿಗೆ ಉದ್ಯೋಗದಾನ ನೀಡಲಿದೆ.

ನೂತನ ಶಿಕ್ಷಣ ನೀತಿ ಸದ್ಬಳಕೆ ಬುದ್ಧಿವಂತಿಕೆ

ಹೊಸ ಶಿಕ್ಷಣ ನೀತಿ ಸರ್ಕಾರದ ನಿರ್ದೇಶನ ಹೊರತು ಆದೇಶವಲ್ಲ, ಹೊಸ ಮಾರ್ಗದರ್ಶನ ವನ್ನು ನಮ್ಮ ಅನುಕೂಲದಂತೆ ಬಳಸಿಕೊಳ್ಳುವುದು ಕರ್ತವ್ಯ ಮತ್ತು ಬುದ್ಧಿವಂತಿಕೆ. ಹೊಸ ಶಿಕ್ಷಣ ನೀತಿಯ ದೋಷಗಳನ್ನು ಹುಡುಕು ವುದು, ಪ್ರಶಂಸೆ ಮಾಡುವ ಬದಲು, ವಿದ್ಯಾಸಂಸ್ಥೆಗಳಲ್ಲಿ ಈ ನೀತಿ ಅಳವಡಿಸಿಕೊಂಡು ಹೊಸತನ ತರುವ ಬಗ್ಗೆ ಯೋಚಿಸಬೇಕು. ಸರ್ಕಾರ ಹೊಸ ನೀತಿ ಕೊಟ್ಟಾಗ ಆ ರೆಕ್ಕೆಗಳನ್ನಿಟ್ಟುಕೊಂಡು ಹಾರಾಟ ಮಾಡಬೇಕೇ ಹೊರತು, ಭೂಮಿಯಲ್ಲಿ ನಿಂತುಕೊಂಡು ಹಾರಾಡುವವರ ಮೇಲೆ ಕಲ್ಲು ತೂರಬಾರದು. ನಮ್ಮ ವಿದ್ಯಾಸಂಸ್ಥೆಗಳಲ್ಲಿ ಹೊಸ ಶಿಕ್ಷಣ ನೀತಿ ಅಳವಡಿಸಿ, ಅದನ್ನು ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಂಡು ಬೆಳೆಯಲು ಪ್ರಯತ್ನಿಸುತ್ತಿದ್ದೇವೆ.

ಜನಜಾಗೃತಿ ಪರಿಣಾಮಕಾರಿ

ಪುರಾಣ ಕಾಲದಿಂದಲೂ ಅಂದರೆ ಯಾದವರು, ಕೃಷ್ಣನ ಕಾಲದಿಂದಲೂ ಮದ್ಯವ್ಯಸನಿಗಳಿದ್ದಾರೆ. ಕೆಲವರು ಮೋಜಿಗಾಗಿ, ಇನ್ನು ಕೆಲವರು ಅಂತಸ್ತಿಗಾಗಿ, ಅಭ್ಯಾಸಕ್ಕಾಗಿ ಮತ್ತೆ ಕೆಲವರು ಸಮಾನತೆಗಾಗಿ ಕೂಡ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಯಾವುದನ್ನು ನಾವು ಒತ್ತಾಯಪೂರ್ವಕವಾಗಿ ರದ್ದು ಮಾಡಬೇಕು ಎಂದು ಹೋರಾಡುತ್ತೇವೆಯೋ ಆಗ ಒಂದು ವಿಭಾಗದ ಜನರಿಗೆ ಅದರ ವಿರುದ್ಧ ಹಟ ಬೆಳೆಯುತ್ತದೆ. ಇಲ್ಲಿ ಹೋರಾಟಕ್ಕಿಂತ ಜನಜಾಗೃತಿ ಹೆಚ್ಚು ಪರಿಣಾಮಕಾರಿ. ಈ ಉದ್ದೇಶದಿಂದಲೇ ಅಕ್ಟೋಬರ್ 2ರಂದು ಬೃಹತ್ ಮಟ್ಟದಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸುತ್ತೇವೆ.

ದುಶ್ಚಟಮುಕ್ತಕ್ಕೆ ಯೋಜನೆ

ಒಂದು ದೌರ್ಬಲ್ಯ ಎಲ್ಲ ರೀತಿಯ ಸಾಧನೆಗಳನ್ನು ತಿಂದು ಹಾಕುತ್ತದೆ. ಮದ್ಯಪಾನದಂಥ ದೌರ್ಬಲ್ಯ ವ್ಯಕ್ತಿಯ ಅವನತಿಗೆ ಕಾರಣವಾಗುತ್ತದೆ. ಹಾಗಾಗಿ ಮದ್ಯಪಾನ, ಜೂಜು ಮೊದಲಾದ ದುಶ್ಚಟಗಳಿಂದ ಮುಕ್ತರನ್ನಾಗಿ ಮಾಡುವ ಯೋಜನೆ ಹಾಕಿಕೊಂಡು ಜನಜಾಗೃತಿ ವೇದಿಕೆ ಮಾಡಿದೆವು. ತಾಲೂಕು ಮಟ್ಟದಲ್ಲಿ ವೇದಿಕೆ ರಚಿಸಿ ಸಹಸ್ರಾರು ಮಂದಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿಯ ಸಾಧನೆಗಳನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವ ಉದ್ದೇಶದಿಂದ ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ‘ಕಾನೂರಾಯಣ’ ಎಂಬ ಸಿನಿಮಾ ಮಾಡಿದೆವು.

ಅನ್ನಪ್ರಸಾದದ ಪಾವಿತ್ರ್ಯಕ್ಕೆ ಮಹತ್ವ

ಶ್ರೀಕ್ಷೇತ್ರದಲ್ಲಿ ಅನ್ನಪ್ರಸಾದದ ಪಾವಿತ್ರ್ಯ್ಕೆ ವಿಶೇಷ ಮಹತ್ವ ಇದೆ. ಎಷ್ಟು ಭಕ್ತರು ಇಲ್ಲಿ ಅನ್ನಪ್ರಸಾದ ಸ್ವೀಕರಿಸಿ ಸಂತೃಪ್ತರಾಗುತ್ತಾರೋ ಅಷ್ಟು ಮಂಜುನಾಥ ದೇವರು ಕೂಡ ಸಂತೃಪ್ತರಾಗುತ್ತಾರೆ ಎನ್ನುವುದು ನಮ್ಮ ನಂಬಿಕೆ. ನನ್ನ ತಮ್ಮ ಹರ್ಷೆಂದ್ರ ಕುಮಾರ ಅನ್ನಪ್ರಸಾದ ವ್ಯವಸ್ಥೆಯನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಅನ್ನದಾನ ಎಷ್ಟು ಪಾವಿತ್ರ್ಯಂದ ಕೂಡಿದೆಯೋ ಅಷ್ಟೇ ಘನತೆ ಹೊಂದಿರಬೇಕು ಎನ್ನುವ ಉದ್ದೇಶದಿಂದ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸ್ವಚ್ಛತೆಗೆ ಪ್ರಾಮುಖ್ಯ ಒದಗಿಸಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net