

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಅನೇಕ ಜನರಿಗೆ ಸಹಾಯವಾಗುವ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲೆಗಳಿಗೆ ಪೀಠೋಪಕರಣ ಕೊಡುಗೆಯೂ ಇವುಗಳಲ್ಲಿ ಸೇರಿದೆ. ವಿದ್ಯಾರ್ಥಿಗಳು ಉತ್ತಮ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ಕಾರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶಾಲೆಗಳಿಗೆ ಪೀಠೋಪಕರಣ ಒದಗಿಸಲಾಗುತ್ತಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ಹೊಸಪೇಟೆ ಸಹಿತ ರಾಜ್ಯದ 287 ಶಾಲೆಗಳಿಗೆ 2,550 ಪೀಠೋಪಕರಣಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಸಮುದಾಯ ಅಭಿವೃದ್ಧಿ ವಿಭಾಗದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಜ್ಞಾನದೀಪ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮದಡಿ ಇದುವರೆಗೆ 9,213 ಶಾಲೆಗಳಿಗೆ ಪೀಠೋಪಕರಣಕ್ಕೆ 15.92 ಕೋಟಿ ರೂ, 6635 ಶಾಲೆಗಳಿಗೆ ಕಟ್ಟಡ ರಚನೆಗೆ 746.43 ಕೋಟಿ ರೂ, 5,736 ಸ್ವಯಂಸೇವಕ ಶಿಕ್ಷಕರ ಗೌರವಧನಕ್ಕಾಗಿ 954.53 ಕೋಟಿ ರೂ, 1252 ಶಾಲೆಗಳಿಗೆ ಬೋಧನಾ ಸಾಮಗ್ರಿಗಳಿಗಾಗಿ 14.03 ಕೋಟಿ ರೂ, 1950 ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳಿಗೆ 21.10 ಕೋಟಿ ರೂ, 237 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 22.14 ಕೋಟಿ ರೂ, 354 ಶಾಲೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ 9.66 ಕೋಟಿ ರೂ, 729 ಶಾಲೆಗಳಿಗೆ ಶೌಚಗೃಹ ನಿರ್ಮಾಣಕ್ಕೆ 112.11 ಕೋಟಿ ರೂ, 238 ಶಾಲೆಗಳ ಕಟ್ಟಡ ದುರಸ್ತಿಗಾಗಿ 37.65 ಕೋಟಿ ರೂ, 514 ಶಾಲೆಗಳ ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ 76.67 ಕೋಟಿ ರೂ, 355 ಆಟದ ಮೈದಾನ ರಚನೆಗೆ 42.26 ಕೋಟಿ ರೂ. ಹೀಗೆ ಒಟ್ಟು 90,062 ಶಾಲೆಗಳಿಗೆ 3628.84 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದರು.
ಹೇಮಾವತಿ ವಿ.ಹೆಗ್ಗಡೆ, ಹೆಗ್ಗಡೆಯವರ ಆಪ್ತ ಕಾಯದರ್ಶಿ ವೀರು ವಿ.ಶೆಟ್ಟಿ, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಯೋಜನಾಧಿಕಾರಿ ಪುಷ್ಪರಾಜ್, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ದನ್, ಉದ್ಯಮಿ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ ಉಜಿರೆ ಉಪಸ್ಥಿತರಿದ್ದರು.
ಹತ್ತು ವರ್ಷಗಳಲ್ಲಿ 29 ಜಿಲ್ಲೆಗಳ 9,213 ಶಾಲೆಗಳಿಗೆ 58,915 ಜತೆ ಡೆಸ್ಕ್ ಬೆಂಚನ್ನು ವಿತರಿಸಲಾಗಿದೆ. ಇದಕ್ಕೆ 15,92,26,000 ರೂ. ವಿನಿಯೋಗಿಸಲಾಗಿದೆ. ಈ ವರ್ಷವೂ 1,78,50,000 ರೂ. ವಿನಿಯೋಗಿಸಲಾಗಿದ್ದು, 10,200 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಇದರಲ್ಲಿ ಕ್ಷೇತ್ರದ ಶೇ.80 ಪಾಲು ಇದ್ದರೆ, ಶಾಲಾಭಿವೃದ್ಧಿ ಸಮಿತಿ ಶೇ.20 ಭರಿಸುತ್ತದೆ. ಈ ಕಾರ್ಯಕ್ರಮ ನಿರಂತರ ನಡೆಯಲಿದೆ.
ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ