

ಬೆಂಗಳೂರು: ಭಾರತ ಧರ್ಮ ಪ್ರಧಾನವಾದ ದೇಶ. ಹಲವಾರು ಧರ್ಮಗಳು, ಪರಂಪರೆಗಳು ಬೆರೆತುಕೊಂಡು ಬಂದಿವೆ. ಅವೆಲ್ಲವುಗಳ ಗುರಿ ಸರ್ವರಿಗೂ ಒಳಿತನ್ನು ಬಯಸುವುದೇ ಆಗಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ.
ಭಾರತನಗರದಲ್ಲಿ ಸಮಸ್ತ ವೀರಶೈವ ಲಿಂಗವಂತ ಸಮಾಜ ಆಯೋಜಿಸಿದ್ದ ಇಷ್ಟಲಿಂಗಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಾನವ ಜನ್ಮದ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಸತ್ಯಂ ವಧ, ಧರ್ಮಂ ಚರ ಎಂಬ ವಾಕ್ಯದಂತೆ ಸತ್ಯವನ್ನು ಮಾತಾಡುವುದು, ಧರ್ಮದಂತೆ ನಡೆಯುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ವೀರಶೈವ ಧರ್ಮ ಸರ್ವರಿಗೂ ಒಳಿತನ್ನೇ ಬಯಸುತ್ತದೆ. ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯರು ಅಹಿಂಸಾದಿ ದಶ ಧರ್ಮಸೂತ್ರಗಳನ್ನು ಬೋದಿಸಿ ಮಾನವ ಜನಾಂಗವನ್ನು ಉದ್ದರಿಸಿದ್ದಾರೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯಕ್ಕೆ ಒತ್ತುಕೊಟ್ಟಿದ್ದು ವೀರಶೈವ ಧರ್ಮ. ಜಾತಿ,ಧರ್ಮದ ಹೆಸರಿನಲ್ಲಿ ದ್ವೇಷ ಭಾವನೆ ಬೆಳೆಯಬಾರದು. ವೈಚಾರಿಕತೆ ಹೆಸರಿನಲ್ಲಿ ಧರ್ಮ-ಸಂಸ್ಕೃತಿ ನಾಶವಾಗಬಾರದು ಎಂದು ಜಗದ್ಗುರುಗಳು ಕರೆ ನೀಡಿದರು.
ಸಮಾರಂಭದಲ್ಲಿ ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಉಪನ್ಯಾಸ ನೀಡಿದರು. ಎಡೆಯೂರು, ಸಿದ್ಧರಬೆಟ್ಟ, ದೊಡ್ಡಗುಣಿ, ಸಂಗೊಳ್ಳಿ ಮಠದ ಶ್ರೀಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ದೊಡ್ಡಣ್ಣ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಎಸ್‌ಜೆಆರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ್, ಆರ್.ವಿ.ಭದ್ರಯ್ಯ ಗ್ರಂಧಿಗೆ ಭಂಡಾರದ ಆರ್.ಬಿ.ಬಸವರಾಜ್, ಬೀರೂರು ಶಿವಸ್ವಾಮಿ, ಗಾನಸುಧೆ ಮುಖ್ಯಸ್ಥ ಶಿವಶಂಕರ ಶಾಸಿ ಮತ್ತಿತರರು ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಮುಖ್ಯರಸ್ತೆಯಲ್ಲಿ ನಡೆದ ಸಾರೋಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವೀರಗಾಸೆ ಮತ್ತಿತರ ಮಂಗಳವಾದ್ಯಗಳು ಹಾಗೂ ಮಹಿಳೆಯರು ಪೂರ್ಣಕುಂಣ ನಗರದ ಜನರ ಗಮನಸೆಳೆಯಿತು.