ತುಳು- ಕನ್ನಡ ವಿದ್ವಾಂಸ ಡಾ.ವಾಮನ ನಂದಾವರ ನಿಧನ

vn
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ತುಳು ಹಾಗೂ ಕನ್ನಡ ವಿದ್ವಾಂಸ, ಜಾನಪದ ಸಂಶೋಧಕ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ (82) ಶನಿವಾರ ಬೆಳಗ್ಗೆ ನಿಧನ ಹೊಂದಿದರು. ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇವರು ಪತ್ನಿ, ಲೇಖಕಿ ಚಂದ್ರಕಲಾ ನಂದಾವರ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮೂಲತಃ ಬಂಟವಾಳ ತಾಲೂಕಿನ ನಂದಾವರ ಗ್ರಾಮದ ಬಾಬು ಬಾಳೆಪುಣಿ ಮತ್ತು ಪೂವಮ್ಮ ದಂಪತಿಯ ಪುತ್ರ. ವಾಮನ ನಂದಾವರ ಅವರಿಗೆ ಕಾಂತಾವರ ಕನ್ನಡ ಸಂಘದ ಪುರಸ್ಕಾರ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಬನ್ನಂಜೆ ಬಾಬು ಅಮಿನ್ ಸಹಿತ ಹಲವು ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಕವನ ಸಂಕಲನ ’ತಾಳಮೇಳ’ ತುಳು ಕನ್ನಡ ಒಗಟುಗಳ ಸಂಕಲನ ’ಓಲೆಪಟಾಕಿ’, ತುಳು ಜಾನಪದ ಪ್ರಬಂಧ ’ತುಳುವೆರೆ ಕುಸಾಲ್ ಕುಸೆಲ್’, ತುಳು ಜಾನಪದ ಅಧ್ಯಯನ ಪ್ರಬಂಧ ’ಸಿಂಗದನ’ ’ತುಳುಟು ಪನಿಕತೆ’, ’ಕೋಟಿ ಚೆನ್ನಯ- ಜಾನಪದ ಸುತ್ತಮುತ್ತ’, ಡಿ.ವಿ.ಜಿ.ಯವರ ಸಾಹಿತ್ಯ ಕುರಿತ ವಿಮರ್ಶೆ ’ನಂಬಿಕೆ’, ’ಅಜ್ಜಿ ತಾಂಕಿನ ಪುಳ್ಳಿ’, ’ನೆತ್ತರಾ ನೀರಾ’, ಇಂಚಿತ್ತಿ ತುಳು ನಾಟಕೊಲು, ತುಳು ಸಾಹಿತ್ಯ ಚರಿತ್ರೆ, ’ತುಳು ಜಾನಪದದ ಆಚರಣೆ’, ಮನಶಾಸ್ತ್ರ ವಿಜ್ಞಾನಿಯ ಜೀವನ ಸಾಧನೆ ಕುರಿತ ’ಸರ್ ಜೀಮ್ಸ್ ಜಾರ್ಜ್ ಫ್ರೆಜರ್’, ’ಒಂಜಿ ಕೋಪೆ ಕತೆಕುಲು’, ’ಕಿಡಿಗೇಡಿಯ ಕೀಟಲೆ, ಮಕ್ಕಳ ಕಥೆ ’ಕೋಟಿ ಚೆನ್ನಯ’ ತುಳು ಕವನ ಸಂಕಲನ ’ಬೀರ’ ಇವು ಅವರ ಪ್ರಮುಖ ಕೃತಿಗಳು.

ಅವರು ರಚಿಸಿದ ’ತುಳುವರ ಕುಸಾಲ್- ಕುಸೆಲ್’ ಕೃತಿಗೆ ಭಾರತೀಯ ಭಾಷಾ ಕೇಂದ್ರೀಯ ಸಂಸ್ಥೆಯ ಪ್ರಶಸ್ತಿ ದಕ್ಕಿದೆ. ’ಸಿಂಗದನ ಮತ್ತು ಜಾನಪದ ಸುತ್ತ ಮುತ್ತ’ ಕೃತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುರಸ್ಕಾರಕ್ಕೆ ಭಾಜನವಾಗಿದೆ. ’ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಕೃತಿಯು ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನವನ್ನು ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net