

ಹುಬ್ಬಳ್ಳಿ: ಮಾನವ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಿದರೆ ಅದು ದೇವರಿಗೆ ಸಲ್ಲುತ್ತದೆ. ಈ ತತ್ವದಡಿ ನಿರಂತರವಾಗಿ ಮಾನವ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ನಗರದ ಭಟ್ಸ್ ಮೀಡಿಯಾ ಕಚೇರಿಯಲ್ಲಿ ಹಮ್ಮಿಕೊಂಡ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಕೊಟ್ಟಿದ್ದನ್ನು ಯಾವಾಗಲೂ ದಾನ ಎಂದು ಭಾವಿಸಿಲ್ಲ. ಅದೊಂದು ಸೇವೆ ಎಂದು ಭಾವಿಸಿದ್ದು, ಈ ಭಾಗ್ಯ ಮತ್ತು ಆಶೀರ್ವಾದ ಕಲ್ಪಿಸಿದ್ದು ದೇವರು. ಇಂತಹ ಅವಕಾಶಗಳು ಇದ್ದವರೆಲ್ಲರಿಗೂ ಬರುವುದಿಲ್ಲ. ಈ ಅವಕಾಶವನ್ನು ನನಗೆ ಒದಗಿಸಿರುವ ಭಗವಂತನಿಗೆ ನಾನು ಸದಾ ಚಿರಋಣಿ ಎಂದರು.
ಸಾಮಾಜಿಕ ಕೆಲಸ ಕಾರ್ಯಗಳಿಗೆ ಕೈಬಿಚ್ಚಿ ಕೊಟ್ಟಷ್ಟು ದೇವರು ದುಪ್ಪಟ್ಟು ಕರುಣಿಸುತ್ತಿದ್ದಾನೆ. ಗಳಿಸಿದ ಎಲ್ಲವನ್ನೂ ಮಕ್ಕಳಿಗೆ ಹಾಗೂ ನನಗೆ ಬಚ್ಚಿಡುವ ಅನಿವಾರ್ಯತೆ ಇಲ್ಲದಂತಹ ವಾತಾವರಣ ಮನೆಯಲ್ಲಿಯೂ ನಿರ್ವಣಗೊಂಡಿದೆ. ಹೀಗಾಗಿ, ಮಿಗಿಲಾಗಿದ್ದನ್ನು ಸೇವೆಗಾಗಿಯೇ ಮೀಸಲಿಡಬೇಕೆಂಬ ನಿರ್ಣಯ ಮಾಡಿಕೊಂಡಿದ್ದೇನೆ ಎಂದರು.
ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷ ಡಿ.ಜೆ. ಶೆಟ್ಟಿ ಮಾತನಾಡಿ, ಡಾ. ಪ್ರಸಾದ ಅವರು ನಿರಂತರವಾಗಿ ಸಾಮಾಜಿಕ ಸೇವೆ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ದೈವಿ ಭಕ್ತರಾಗಿರುವ ಅವರು, ಸಮಾಜದ ಎಲ್ಲ ಕೆಲಸಕ್ಕೂ ತಮ್ಮ ಕೊಡುಗೈಯಿಂದ ಕೊಟ್ಟಿದ್ದಾರೆ ಮತ್ತು ಕೊಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಉದ್ಯಮಿ ಸಂಭಾಜಿ ಕಲಾಲ ಇದ್ದರು. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಡಾ. ಪ್ರಸಾದ ಅವರಿಗೆ ಶ್ರೀರಾಮನ ಫೋಟೋ ನೀಡಿ ಗೌರವಿಸಲಾಯಿತು. ಭಟ್ಸ್ ಮೀಡಿಯಾದ ದತ್ತಾತ್ರೇಯ ಭಟ್, ಖಂಡೋಭಾ ಸೇರಿದಂತೆ ಇತರರು ಇದ್ದರು.