

ಸವಣೂರ: ತಾಲೂಕು 8ನೇ ಸಾಹಿತ್ಯ ಸಮ್ಮೇಳನ ಯಶಸ್ಸಿಗಾಗಿ ಸಿದ್ಧತೆ ಕೈಗೊಳ್ಳಲಾಗಿದ್ದು, ಸಾಹಿತ್ಯಾಸಕ್ತರು ಸಹಕಾರ ನೀಡಬೇಕು ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮೈಲಾರಪ್ಪ ತಳ್ಳಳ್ಳಿ ತಿಳಿಸಿದರು.
ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಲಾಂಛನ ಬಿಡುಗಡೆ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ, ಘೊಷಣೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮ್ಮೇಳನ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಾಹಿತ್ಯಾಸಕ್ತರನ್ನು ಗುರುತಿಸಿ ಸಮಿತಿಯಲ್ಲಿ ಜವಾಬ್ದಾರಿಯುತ ಕಾರ್ಯಗಳನ್ನು ವಹಿಸಲಾಗಿದೆ. ಸರ್ಕಾರಿ ನೌಕರರ ಸಂಘಟನೆ ಹಾಗೂ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಹೆಚ್ಚಿನ ಬೆಂಬಲ ನೀಡಬೇಕು ಎಂದರು.
ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರಭು ಅರಗೋಳ ಮಾತನಾಡಿ, ಸವಣೂರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ತಾಲೂಕಿನ ಕಳಲಕೊಂಡ ಗ್ರಾಮದ ಸಾಹಿತಿ ಡಾ. ವಿ. ಎಂ. ಗುರುಮಠ ಆಯ್ಕೆಯಾಗಿದ್ದಾರೆ ಎಂದು ಘೊಷಿಸಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಸವಣೂರ ತಾಲೂಕಿನ ಕವಿಗಳು ಜ. 18ರ ಒಳಗಾಗಿ ಕಸಾಪ ತಾಲೂಕು ಘಟಕದ ಪದಾಧಿಕಾರಿಗಳಾದ ಸಿ.ವಿ. ಗುತ್ತಲ ಹಾಗೂ ಎಂ. ಎಸ್. ಮಲ್ಲನಗೌಡ್ರ ಅವರಲ್ಲಿ ಹೆಸರು ನೋಂದಾಯಿಸಬೇಕು ಎಂದರು.
ಸಮ್ಮೇಳನ ಕಾರ್ಯಾಧ್ಯಕ್ಷ ಪೀರ್ಅಹ್ಮದ್ ಗವಾರಿ, ಕೋಶಾಧ್ಯಕ್ಷ ಸುಭಾಸ ಮಜ್ಜಗಿ, ಸಹ ಕೋಶಾಧ್ಯಕ್ಷ ವಿಶ್ವನಾಥ ಹಾವಣಗಿ, ಪದಾಧಿಕಾರಿಗಳಾದ ಜಯತೀರ್ಥ ದೇಶಪಾಂಡೆ, ಎಂ.ಜೆ. ಮುಲ್ಲಾ, ರವಿ ಕರಿಗಾರ, ಆನಂದ ವಡಕ್ಕಮ್ಮನವರ, ಎಂ.ಎಂ. ಕಾಲೇಬಾಗ ಹಾಗೂ ಇತರರು ಪಾಲ್ಗೊಂಡಿದ್ದರು. ಕಸಾಪ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಎಸ್. ಅಕ್ಕಿ ನಿರ್ವಹಿಸಿದರು.